ಕಡೆಕಾರು ಚೈತನ್ಯ ಫೌಂಡೇಶನ್: “ಸೇವಾಚೈತನ್ಯ” ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ ಆ.26(ಉಡುಪಿ ಟೈಮ್ಸ್ ವರದಿ): ಕಡೆಕಾರು ಚೈತನ್ಯ ಫೌಂಡೇಶನ್ ವತಿಯಿಂದ 6ನೇ ವರುಷದ “ಸೇವಾಚೈತನ್ಯ” ಪ್ರಶಸ್ತಿ ಪ್ರದಾನ ಸಮಾರಂಭ ಕಡೆಕಾರು ಬಿಲ್ಲವ ಸೇವಾ ಸಂಘದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರವರ್ತಕರಾದ ವಾಲ್ಟರ್ ನಂದಳಿಕೆ ಅವರು ಮಾತನಾಡಿ, ಯಾವುದೇ ಕೆಲಸವನ್ನು ಶ್ರದ್ದೆ ಭಕ್ತಿಯಿಂದ ಮತ್ತು ಸಮರ್ಪನಾ ಮನೋಭಾವದಿಂದ, ನಿರ್ಸಾರ್ಥತೆಯಿಂದ ಮಾಡಿದಾಗ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ. ನಾನೇ ಸರಿ ನಾನು ಮಾಡಿದ್ದೆ ಸರಿ ಎಂಬ ದುರಹಂಕಾರದಿಂದ ಅನೇಕ ಸಂಬಂಧಗಳು ಹಾಳಾಗುತ್ತದೆ. ಬದುಕಿನಲ್ಲಿ ಸಂತೃಪ್ತಿ ಮತ್ತು ಮಾನವೀಯತೆ ಇದ್ದಾಗ ಮನುಷ್ಯ ಜೀವನದಲ್ಲಿ ಖುಷಿಯಿಂದ ಇರಲು ಸಾಧ್ಯ. ಮಾನವೀಯತೆಯಿಂದ ಸೇವೆ ಮಾಡಿದಾಗ ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ. ಇವತ್ತು ಸಮಾಜಕ್ಕೆ ಮಾನವೀಯ ಸೇವೆ ನೀಡುವ ಜೊತೆಗೆ ಮಾನವೀಯ ನೆಲೆಯಲ್ಲಿ ಸಮಾಜಕ್ಕೆ ಸೇವೆ ನೀಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಚೈತನ್ಯ ಫೌಂಡೇಶನ್ ವತಿಯಿಂದ ನಡೆಯುತ್ತಿರುವುದು ಶ್ಲಾಘನಾರ್ಹ ಎಂದರು.
ಈ ವೇಳೆ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ, ಡಾ.ಶೇಖ್ ಅಬ್ದುಲ್ ವಾಹಿದ್ ಉಡುಪಿ ಮತ್ತು ತಾರಾನಾಥ್ ಸುವರ್ಣ ಅವರ ಸಮಾಜ ಸೇವೆಯನ್ನು ಗುರುತಿಸಿ “ಸೇವಾಚೈತನ್ಯ-2024” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ತಿಕ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಹರಿಯಪ್ಪ ಕೋಟ್ಯಾನ್, ಅನಿವಾಸಿ ಉದ್ಯಮಿ ಯುವರಾಜ್ ಮಸ್ಕತ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದಿವಾಕರ್ ಕುಂದರ್, ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್, ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್, ಕಿರುತೆರೆ ಹಾಗೂ ಚಲನ ಚಿತ್ರ ನಟ ಪ್ರದೀಪ್ ಚಂದ್ರ ಕುತ್ಪಾಡಿ, ಡಾ.ಅನುಪಮಾ, ನೀಲಾವತಿ ಎ, ಪ್ರತಾಪ್ ಕುಮಾರ್, ಪೂಜಾ ಶೆಟ್ಟಿ ಉಪಸ್ಥಿತರಿದ್ದರು.