ಪರ್ಯಾಯ ಮಹೋತ್ಸವದ ಛಾಯಾಚಿತ್ರ ಸ್ಪರ್ಧೆ ಬಹುಮಾನ ವಿತರಣೆ

ಉಡುಪಿ ಆ.25(ಉಡುಪಿ ಟೈಮ್ಸ್ ವರದಿ): ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೈನ್ ಸಹಕಾರದೊಂದಿಗೆ ಉಡುಪಿ ಪುತ್ತಿಗೆ ಮಠದ ಪರ್ಯಾಯೋತ್ಸವದ ಅಂಗವಾಗಿ ಛಾಯಾಗ್ರಾಹಕರಿಗಾಗಿ ಏರ್ಪಡಿಸಿದ ಛಾಯಾಚಿತ್ರ ಸ್ಪರ್ಧೆ 2024 ಇದರ ಬಹುಮಾನ ವಿತರಣಾ ಕಾರ್ಯಕ್ರಮ ಉಡುಪಿಯ ಶ್ರೀ ಕೃಷ್ಣ ಮಠದ ಜಾರಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೈನ್ ಇದರ 2023-24 ನೇ ಸಾಲಿನ ಅಧ್ಯಕ್ಷರು ಹಾಗೂ ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ಇದರ ಮಾಲಿಕರಾದ ಲ.ಪ್ರೇಮ್ ಮಿನೇಜಸ್ ಹಾಗೂ ಹೆಚ್.ಪಿ.ಆರ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ಮಣಿಪಾಲ್ ಇದರ ಚೇರ್ಮನ್ ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್ ಫೌಂಡೇಶನ್ ಇದರ ಉಡುಪಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಂಯೋಜಕರು, ಪಿ.ಎಮ್.ಜಿ.ಎಫ್ ಲ.ಹರಿಪ್ರಸಾದ್ ರೈ ಅವರನ್ನು ಅಭಿನಂದಿಸಲಾಯಿತು.

ಈ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಬಹುಮಾನ ನಿಧೀಶ್ ಕುಮಾರ್, ದ್ವಿತೀಯ ಬಹುಮಾನ ಪ್ರಸನ್ನ ಪೆರ್ಡೂರು, ತೃತೀಯ ಬಹುಮಾನ ಪ್ರಜ್ವಲ್ ಕಟಪಾಡಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಇದೇ ವೇಳೆ ಗೀತಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ 7 ದಿನ ನಡೆಯುವ ಶ್ರೀಕೃಷ್ಣ ಸಪ್ಪೋತ್ಸವ ಹಾಗೂ ಸಂಜೀವಿನಿ ಸಂಘಗಳ ಸದಸ್ಯರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿ, ಜಾಗತೀಕರಣದ ಪ್ರಭಾವದಿಂದ ಪಾರಂಪರಿಕ ಕರಕುಶಲತೆ ಕ್ಷೀಣಿಸುತ್ತಿದೆ. ಹೀಗಾಗಿ ಆಧುನಿಕ ಶಿಕ್ಷಣದ ಜತೆಗೆ ಮನೆತನದ ವೃತ್ತಿ ಹಾಗೂ ವಂಶ ಪರಂಪರೆಯ ಕೌಶಲವನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಟಪಾಡಿ ಕಾಳಿಕಾಂಬಾ ದೇವ ಸ್ಥಾನದ ಧರ್ಮದರ್ಶಿ ಮುರಹರಿ ಆಚಾರ್ಯ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘಪತಿ ಭಟ್, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ, ಭುವನೇಂದ್ರ ಕಿದಿಯೂರು, ಸುರೇಂದ್ರ ಕಲ್ಯಾಣಪುರ, ಪ್ರದೀಪ್ ಕಲ್ಕೂರ, ಪುತ್ತಿಗೆ ಮಠದ ರಮೇಶ್ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!