ಕಾನೂನು ಬಾಹಿರವಾಗಿ ಮಗು ದತ್ತು: ಠಾಣೆ ಏರಿದ ಪ್ರಕರಣ
ಕೋಟ ( ಉಡುಪಿ ಟೈಮ್ಸ್ ವರದಿ): ಕಾನೂನು ಬಾಹಿರವಾಗಿ ಮಗು ದತ್ತು ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಮೇ.20 ರಂದು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಂದ ದೂರಿನಂತೆ.ಮಣಿಪಾಲದ ರಜತಾದ್ರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಹಾಗೂ ಬ್ರಹ್ಮಾವರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಕುಮಾರ್ ನಾಯ್ಕ ಮತ್ತು ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಅಂಗನವಾಡಿ ವಲಯ ಮೇಲ್ವಿಚಾರಕಿ ಲಕ್ಷ್ಮೀ ರವರೊಂದಿಗೆ ಬ್ರಹ್ಮಾವರ ತಾಲೂಕು ಬಾಳಕುದ್ರು ಗ್ರಾಮದ ಶಾಹಿಸ್ತ ಅವರ ಬಳಿ ತೆರಳಿ ,ಕಾನೂನು ಬಾಹಿರ ದತ್ತು ಪ್ರಕ್ರಿಯೆ ನಡೆದಿರುವ ಬಗ್ಗೆ ವಿಚಾರಿಸಿದಾಗ ಶಾಹಿಸ್ತ ಮತ್ತು ಆಕೆಯ ಗಂಡ ಫಯಾಝ್ ರವರು ಮದುವೆಯಾಗಿ ಸುಮಾರು 10 ವರ್ಷವಾಗಿದ್ದರೂ ಮಕ್ಕಳಾಗದ ಕಾರಣ, ಮಗುವನ್ನು ದತ್ತು ಪಡೆಯಲು ಇಚ್ಛಿಸಿದ್ದರು. ಆದ್ದರಿಂದ, ಉಡುಪಿಯ ಪರಿಚಯದ ಹುಸೇನ್ ಎಂಬುವವರು ತಿಳಿಸಿದಂತೆ, 2020 ರ ಮಾ.26 ರಂದು ಕಾರ್ಕಳ ತಾಲೂಕಿನ ಸ್ಪಂದನ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಕಳದ ಪಡ್ಯ, ದರ್ಖಾಸು, ಕಲ್ಯಾ ಗ್ರಾಮದ ಕುಂಟಾಡಿಯ ರಾಜೇಶ್ ಮತ್ತು ಸುಕನ್ಯರವರಿಗೆ ಹುಟ್ಟಿದ್ದ ಹೆಣ್ಣು ಮಗುವನ್ನು ಸಾಕಲು ಕಷ್ಟವಾಗುವುದಾಗಿ ಹೇಳಿದ್ದರಿಂದ ಆಸ್ಪತ್ರೆಯ ಬಿಲ್ಲನ್ನು ಕಟ್ಟಿ, ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಅವರಿಂದ ಮಗುವನ್ನು ಪಡೆದು, ಅವರಿಗೆ 80,000 ರೂ. ಹಣವನ್ನು ಕೊಟ್ಟು, ನಂತರ ಬಾಳ್ಕುದ್ರುವಿನಲ್ಲಿರುವ ಅವರ ಮನೆಗೆ ಕರೆತಂದಿರುವುದಾಗಿ ತಿಳಿಸಿರುತ್ತಾರೆ.
ನಂತರ ಮಗುವಿನ ಜನನ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ರವರನ್ನು ಸಂಪರ್ಕಿಸಿ ಸ್ಪಂದನ ಹೆರಿಗೆ ಆಸ್ಪತ್ರೆಯಲ್ಲಿ 2020ರ ಜೂನ್ 5 ರಂದು ಜನಿಸಿರುವ ಹೆಣ್ಣು ಮಗುವಿಗೆ ಕೊಪ್ಪದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿರುವುದಾಗಿ ಜನನ ಪ್ರಮಾಣ ಪತ್ರ ಪಡೆಯಲು ಸಹಕರಿಸಿರುತ್ತಾರೆ. ಇದಕ್ಕಾಗಿ 30,000 ರೂವನ್ನು. ಆ ವೈದ್ಯಾಧಿಕಾರಿಯವರಿಗೆ ನೀಡಿರುವುದಾಗಿಯೂ ತಿಳಿಸಿರುತ್ತಾರೆ.
ಹೆಣ್ಣು ಮಗುವಿನ ಕಾನೂನು ಬಾಹಿರವಾಗಿ ದತ್ತು ಪಡೆದಿರುವ ಬಾಳ್ಕುದ್ರುವಿನ ಶಾಹಿಸ್ತ, ಫಯಾಝ್ ಹಾಗೂ ಮಗುವಿನ ಸ್ವಂತ ತಂದೆ ರಾಜೇಶ್, ತಾಯಿ ಸುಕನ್ಯ ಹಾಗೂ ಮಗುವಿಗೆ ಕಾನೂನು ಬಾಹಿರವಾಗಿ ಜನನ ಪ್ರಮಾಣ ಪತ್ರವನ್ನು ಪಡೆಯಲು ಸಹಕರಿಸಿರುವ ವೈದ್ಯಾಧಿಕಾರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ದಾಖಲಾಗಿದ್ದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.