ಉಡುಪಿ: ಆನ್ ಲೈನ್ ಟ್ರೇಡಿಂಗ್ ವಂಚನೆ- ನಾಲ್ವರು ಅರೆಸ್ಟ್
ಉಡುಪಿ ಆ.22(ಉಡುಪಿ ಟೈಮ್ಸ್ ವರದಿ): ಆನ್ಲೈನ್ ಟ್ರೇಡಿಂಗ್ ನಲ್ಲಿ ಹೂಡಿಕೆ ಆಮಿಷ ತೋರಿಸಿ 33.10 ಲಕ್ಷ ರೂ. ವಂಚಿಸಿದ 4 ಮಂದಿ ಆರೋಪಿಗಳನ್ನು ಉಡುಪಿ ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಈಶ್ವರಮಂಗಲದ ಮುಸ್ತಾಫ, ಮಂಗಳೂರಿನ ಕಾರ್ ಸ್ಟ್ರೀಟ್ ನ ಸತೀಶ್ ಶೇಟ್, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಂಬ್ರಾಣದ ಖಾಲೀದ್, ಬದಿಯಡ್ಕದ ಸಫ್ವಾನ್ ಬಂಧಿತ ಆರೋಪಿಗಳು. ಬಂಧಿತರಿಂದ ರೂ. 13,00,000/- ನಗದು, ಹಾಗೂ 5 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಸೂತ್ರಧಾರಿಗಳಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚೆಂಗಳ ವಾಸಿ ದುಬೈ ದೇಶದಲ್ಲಿರುವ ಬದ್ರುಲ್ ಸಿದ್ಧಿಕ್, ಪೊವ್ವಲ್ ವಾಸಿಗಳಾದ ರಶೀದ್, ನಂಶಾದ್, ಬಂಬ್ರಾಣ ಮಹಮ್ಮದ್, ನೀರ್ಚಾಲ್ ಮುಸ್ತಾಫ, ಕನ್ಯಾಪಾಡಿ ಅರ್ಷದ್, ಕೊಲ್ಲಂಗಾಣ ಮರ್ಷದ್, ದ.ಕ ಜಿಲ್ಲೆಯ ಪುತ್ತೂರಿನ ಅಬ್ದುಲ್ ಸಮದ್ ರವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕ ಡಾ ಅರುಣ್ ಕೆ ರವರ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಟಿ ಸಿದ್ಧಲಿಂಗಪ್ಪ ಮತ್ತು ಪರಮೇಶ್ವರ ಹೆಗ್ಡೆ ರವರ ನಿರ್ದೇಶನದಂತೆ ಸೆನ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ನಾಲ್ವರು ಆರೋಪಿಗಳನ್ನು ಬಂದಿಸಿ, ವಂಚಿಸಿದ ನಗದು ವಶಪಡಿಸಿಕೊಂಡಿದ್ದಾರೆ.
ಉಡುಪಿಯ ಅಂಬಲಪಾಡಿ ಕಿದಿಯೂರು ಮುಖ್ಯರಸ್ತೆಯ ನಿವಾಸಿ ಉಪೇಂದ್ರ ಭಟ್ ರವರ ಮೊಬೈಲ್ ನಂಬರಿಗೆ ಅಪರಿಚಿತ ವ್ಯಕ್ತಿ ಕರೆಮಾಡಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ನ ಅಕೌಂಟ್ ನಂಬರ್ ನೀಡಿ ಅದರಲ್ಲಿ ಟ್ರೇಡಿಂಗ್ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ಆಸೆ ತೋರಿಸಿದ್ದನು. ಇದನ್ನು ನಂಬಿದ ಉಪೇಂದ್ರ ಭಟ್ ರವರು ಅವರ ಬ್ಯಾಂಕ್ ಖಾತೆಯಿಂದ ಅಪರಿಚಿತರ ಬ್ಯಾಂಕ್ ಖಾತೆಗೆ ರೂ 33,10,000 ಹಣವನ್ನು ಡಿಪಾಸಿಟ್ ಮಾಡಿದ್ದರು. ಬಳಿಕ ಉಪೇಂದ್ರ ಭಟ್ ರವರು ಈ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿದ್ದು ತಿಳಿದು ಬಂದಿದ್ದು, ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪಡುಬಿದ್ರಿ ಠಾಣಾ ಎ ಎಸ್ ಐ ರಾಜೇಶ್ ಪಿ, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ ಪ್ರವೀಣ್ ಕುಮಾರ್, ಅರುಣ್ ಕುಮಾರ್, ವೆಂಕಟೇಶ್,ಯತೀನ್ ಕುಮಾರ್, ರಾಘವೇಂದ್ರ, ಪ್ರಶಾಂತ್ ಮತ್ತು ಕಾರ್ಕಳ ನಗರ ಠಾಣಾ ಹೆಚ್ ಸಿ ಪ್ರಸನ್ನ ಸಿ. ಸಾಲ್ಯಾನ್ ಚಾಲಕ ಸುದೀಪ್ ಭಾಗವಹಿಸಿದ್ದರು.