ಮಂಗಳೂರು: ಸಾಲ ತೀರಿಸಲು ನಕಲಿ ನೋಟ್ ಪ್ರಿಂಟ್- ನಾಲ್ವರು ಅರೆಸ್ಟ್
ಮಂಗಳೂರು ಆ.20 ಸಾಲ ತೀರಿಸಲು ನಕಲಿ ನೋಟು ಮುದ್ರಿಸುತ್ತಿದ್ದ ಆರೋಪದ ಮೇಲೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಮೂಲದ ವಿ. ಪ್ರಿಯೇಶ್ (38), ವಿನೋದ್ ಕುಮಾರ್ ಕೆ (33), ಅಬ್ದುಲ್ ಖಾದರ್ ಎಸ್.ಎಂ (58) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಅಯೂಬ್ ಖಾನ್ (51) ಬಂಧಿತ ಆರೋಪಿಗಳು. ಬಂಧಿತರಿಂದ 500 ರೂಪಾಯಿ ಮುಖಬೆಲೆಯ 2,13,500 ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಾಸರಗೋಡಿನಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದ ಆರೋಪಿ ಪ್ರಿಯೇಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದ ಪ್ರಿಯೇಶ್ ಸಾಲ ಮರುಪಾವತಿಸಲು ನಕಲಿ ನೋಟು ಮುದ್ರಣ ಮಾಡಬೇಕೆಂದು ನಿರ್ಧರಿಸಿದ್ದನು. ಆ ಬಳಿಕ ಆನ್‌ಲೈನ್‌ನಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸಿ ಯೂಟ್ಯೂಬ್ ಮೂಲಕ ನಕಲಿ ನೋಟುಗಳನ್ನು ಮುದ್ರಿಸುವುದನ್ನು ಕಲಿತುಕೊಂಡಿದ್ದಾನೆ ಎನ್ನಲಾಗಿದೆ.
ಕಳೆದ ಮೂರು ತಿಂಗಳಿಂದ ಚೆರ್ಕಳದಲ್ಲಿರುವ ತನ್ನ ಪ್ರಿಂಟಿಂಗ್ ಪ್ರೆಸ್ನಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಪ್ರಿಯೇಶ್, ಇತರ ಆರೋಪಿಗಳಾದ ವಿನೋದ್ ಕುಮಾರ್, ಅಬ್ದುಲ್ ಖಾದರ್, ಅಯೂಬ್ ಖಾನ್ ಸಹಾಯದ ಮೂಲಕ ನಕಲಿ ನೋಟುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ..
ಈ ನಕಲಿ ನೋಟುಗಳ ಚಲಾವಣೆಗಳ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಮಂಗಳೂರು ಪೊಲೀಸರು ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇರಿಸಿ ನಕಲಿ ನೋಟುಗಳ ಚಲಾವಣೆಗೆ ಬಂದ ಸಂದರ್ಭದಲ್ಲಿಯೇ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.