ಕಾಪು: ನಾಲ್ವರು ಕೋವಿಡ್ ಸೋಂಕಿತರು ಮುಂಬೈಗೆ ಪರಾರಿ ಕೇಸು ದಾಖಲು!
ಉಡುಪಿ ಮೇ.21(ಉಡುಪಿ ಟೈಮ್ಸ್ ವರದಿ): ಕೋವಿಡ್ ಸೋಂಕು ದೃಢಪಟ್ಟು ಹೋಂ ಐಸೊಲೇಶನ್ ನಲ್ಲಿ ಇದ್ದ ಸೋಂಕಿತರು ಕ್ವಾರೆಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ತಿರುಗಾಡುತ್ತಿದ್ದವರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಕಾವ್ರಾಡಿ ಹಾಗೂ ಕಾಪು ಪರಿಸರಕ್ಕೆ ತೆರಳಿದ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮಾಹಿತಿ ನೀಡಿದ್ದು, ಅದರಂತೆ, ಕವ್ರಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿ ಹೋಮ್ ಐಸೋಲೇಶನ್’ನಲ್ಲಿದ್ದು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗೆ ತಿರುಗಾಡುತ್ತಿದ್ದಾರೆಂಬ ದೂರಿಗೆ ಸಂಬಂಧಿಸಿ ಕುಂದಾಪುರ ಸಹಾಯಕ ಕಮಿಷನರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸೋಂಕಿತ ವ್ಯಕ್ತಿ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ದ ವ್ಯಕ್ತಿಯ ವಿರುದ್ಧ ತಕ್ಷಣ ಎಫ್ ಐಆರ್ ಧಾಖಲಿಸಲು ಸೂಚಿಸಿದ್ದರು ಅದರಂತೆ ಇಂದು ಕವ್ರಡಿ ಪಿಡಿಒ ನಿಯಮ ಉಲ್ಲಂಘಿಸಿದ ಸೋಂಕಿತ ವ್ಯಕ್ತಿಯ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಕಾಪು ಪುರಸಭಾ ವ್ಯಾಪ್ತಿಯ ಲೈಟ್ ಹೌಸ್ ವಾರ್ಡ್ ನ, ಕೋಟ್ಯಾನ್ ಮೂಲಸ್ಥಾನದ ಬಳಿ ಪಡುವಿನಲ್ಲಿ ವಾಸವಿದ್ದ, 4 ಮಂದಿ ಕೋವಿಡ್ 19 ಪಾಸಿಟಿವ್ ರೋಗಿಗಳು ಮೇ 18ರಿಂದ ಹೋಂ ಐಸೋಲೇಶನ್ ನಲ್ಲಿದ್ದು, ಐಸೋಲೇಶನ್ ಆದೇಶವನ್ನು ಉಲ್ಲಂಘಿಸಿ, ತಮ್ಮಿಂದ ಸೋಂಕು ಇತರರಿಗೆ ಹರಡುವುದೆಂದು ತಿಳಿದಿದ್ದರೂ ಕೂಡ, ನಿರ್ಲಕ್ಷ್ಯ ತನದಿಂದ ಸರ್ಕಾರದ ಮಾರ್ಗಸೂಚಿ ಗಳನ್ನು ಉಲ್ಲಂಘಿಸಿ ಮುಂಬೈಗೆ ಹೋಗಿದ್ದು, ಇವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆoದು ತಿಳಿಸಿದ್ದಾರೆ.