ಶಿರ್ವ: ಕನ್ನಡ ಜಾನಪದ ಪರಿಷತ್ – ಕಾಪು ತಾಲೂಕು ಘಟಕ ಉದ್ಘಾಟನೆ

ಶಿರ್ವ ಆ.13(ಉಡುಪಿ ಟೈಮ್ಸ್ ವರದಿ):  ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕದ ವತಿಯಿಂದ ಕಾಪು ತಾಲೂಕು ಘಟಕದ ಉದ್ಘಾಟನಾ ಸಮಾರಂಭವು ಕಟಪಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇಂದು ನಡೆಯಿತು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಅವರು ತುಳುನಾಡಿನ ತೆಂಬರೆ ವಾದ್ಯವನ್ನು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜನಪದವೇ ನಮ್ಮ ಉಸಿರು. ಕನ್ನಡ ನಾಡು, ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಜನಪದ ಕ್ಷೇತ್ರ ಮತ್ತು ಜನಪದ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಜನಪದವನ್ನು ಉಳಿಸಿ ಬೆಳೆಸುವುದಕ್ಕಾಗಿ‌ ಕನ್ನಡ ಜಾನಪದ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ಒಟ್ಟು 194 ತಾಲೂಕು ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಈ ವೇಳೆ ಕಾಪು ತಾಲೂಕು ತಹಶೀಲ್ದಾರ್ ಡಾ.‌ಪ್ರತಿಭಾ ಆರ್. ಅವರು ಮಾತನಾಡಿ, ಜನಪದ ಕಲೆಯು ತತ್ವ, ನೀತಿ, ಮನರಂಜನೆಯ ಪ್ರಾಕಾರ ವಾಗಿದೆ. ಆದರೆ ಇಂದು ಜನಪದ ಕಲೆಯು ಜನರಿಂದ ದೂರವಾಗುತ್ತಿದೆ. ಆಧುನಿಕತೆ ಬೆಳೆದಂತೆ ನಮ್ಮ ಸಂಸ್ಕೃತಿ, ಸಂಸ್ಕಾರ, ಕಲೆಗಳು ಮರೆಯಾಗುತ್ತಿದ್ದು ಇದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಕಾಪು ತಾಲೂಕು ಘಟಕದ ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಹಾಗೂ ಕಟಪಾಡಿಯ ನಾಟಿ ವೈದ್ಯ ಸತೀಶ್ ಶೆಟ್ಟಿಗಾರ್ ಅವರಿಗೆ ಜಾನಪದ ವೈದ್ಯಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾ ವಿ.ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಟಪಾಡಿಯ ಆಯುರ್ವೇದ ತಜ್ಞ ಡಾ.ಯು.ಕೆ.ಶೆಟ್ಟಿ, ಉಡುಪಿ ಹೃದಯಂ ಫೌಂಡೇಶನ್ ಅಧ್ಯಕ್ಷ ಸುಭಾಸ್ ಎಂ.ಸಾಲಿಯಾನ್, ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷೆ ಮಾಯಾ ಕಾಮತ್, ಕಟಪಾಡಿ ಸ್ವಸ್ತಿಕ್ ಸಂಘದ ಅಧ್ಯಕ್ಷ ರಮೇಶ್ ಕೆ.ಕೋಟ್ಯಾನ್ ಕಟಪಾಡಿ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಗಣೇಶ್ ಕುಮಾರ್ ಗಂಗೊಳ್ಳಿ,  ಕಾಪು ತಾಲೂಕು ಅಧ್ಯಕ್ಷ ದಯಾನಂದ ಕೆ.ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಸುವರ್ಣ ಕಟಪಾಡಿ, ತಾಲೂಕು ಘಟಕದ ಕಾರ್ಯದರ್ಶಿ ಕೆ.ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!