ಉಡುಪಿ: ಲೆಕ್ಸ್ ಅಲ್ಟಿಮಾ -2024’- ವಿಬಿಸಿಎಲ್‌ಗೆ ಸಮಗ್ರ ಪ್ರಶಸ್ತಿ
ಉಡುಪಿ ಜು.31: ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಆಯೋಜಿಸಿದ್ದ ‘ಲೆಕ್ಸ್ ಅಲ್ಟಿಮಾ -2024’ ರಾಷ್ಟ್ರ ಮಟ್ಟದ ಕಾನೂನು ಹಬ್ಬದಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದ್ದಾರೆ.
ಮೂರು ದಿನಗಳ ಕಾಲ ನಡೆದ ಈ ಕಾನೂನು ಹಬ್ಬದಲ್ಲಿ ಅಣಕು ನ್ಯಾಯಾಲಯ, ಕಾನೂನು ರಸಪ್ರಶ್ನೆ, ತೀರ್ಪು ಬರೆಯುವ ಸ್ಪರ್ಧೆ, ಕಾನೂನು ಚರ್ಚೆ, ಶಾಸನ ರಚನೆ, ಜಾಮೀನು ಅರ್ಜಿ ಸ್ಪರ್ಧೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದಿದ್ದವು.
ಈ ಸ್ಪರ್ಧೆಯಲ್ಲಿ ಉಡುಪಿಯ ವಿಬಿಸಿಎಲ್ ಸಮಗ್ರ ಪ್ರಶಸ್ತಿ ಗೆದ್ದುಕೊಂಡರೆ, ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜು ಹಾಗೂ ಬೆಂಗಳೂರು ಇನ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜು ತಂಡಗಳು ರನ್ನರ್ ಅಪ್ ಪ್ರಶಸ್ತಿಯನ್ನು ಹಂಚಿಕೊಂಡವು.
ಸ್ಪರ್ಧೆಗಳಲ್ಲಿ ತೀರ್ಪು ಬರಹ ಮತ್ತು ಉತ್ತಮ ಸ್ಪೀಕರ್ ಆಗಿ ವಿಬಿಸಿಎಲ್‌ನ ಮರಿಯಾ ತೆರೇಸಾ ಹೊರಹೊಮ್ಮಿದರು. ಜಾಮೀನು ಅರ್ಜಿ ಮತ್ತು ಕಾನೂನು ಕರಡು ಪ್ರತಿ ಸಿದ್ದಪಡಿಸುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಲ್ಲವಿ ತಮ್ಮದಾಗಿಸಿಕೊಂಡರು.
43 ಕಾನೂನು ಕಾಲೇಜುಗಳ 160ಕ್ಕೂ ಅಧಿಕ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.