ಉಡುಪಿ: 2 ನೇ ಹಂತದ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸಲು ಯೋಜನೆ -ವಿ.ಎಸ್.ಉಗ್ರಪ್ಪ
ಉಡುಪಿ ಜು.30 : ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಬೆಂಗಳೂರಿನ ಬಿಬಿಎಂಪಿ ಚುನಾವಣೆಗಾಗಿ ಎರಡನೇ ಹಂತದ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣಾ ವೈಫಲ್ಯಗಳ ಕುರಿತು ಪಕ್ಷದ ಕಾರ್ಯ ಕರ್ತರೊಂದಿಗೆ ಸಮಾಲೋಚಿಸಿ ವರದಿ ನೀಡಲು ರಚಿಸಲಾದ ಸತ್ಯಶೋಧನಾ ಸಮಿತಿ ಈಗಾಗಲೇ ಚಿಕ್ಕಮಗಳೂರು ಹಾಗೂ ಮಂಗಳೂರಿಗೆ ಭೇಟಿ ನೀಡಿದ್ದು, ಇನ್ನು ಮುಂದೆ ಕಾರವಾರ, ಶಿವಮೊಗ್ಗ ಜಿಲ್ಲೆಗಳಿಗೆ ಭೇಟಿ ನೀಡಬೇಕಾಗಿದೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕನಿಷ್ಠ 20 ಸೀಟು ಗೆಲ್ಲುವ ವಿಶ್ವಾಸ ಹೊಂದಿದ್ದೆವು. ಆದರೆ ಕೊನೆಗೆ ಸಿಕ್ಕಿದ್ದು 9 ಸ್ಥಾನಗಳು ಮಾತ್ರ. ನಿರೀಕ್ಷೆಗೆ ತಕ್ಕ ಸಾಧನೆ ಕಾಣದಿರಲು ಕಾರಣಗಳೇನು ಹಾಗೂ ಕೆಲವು ಕಡೆಗಳಲ್ಲಿ ಹೆಚ್ಚು ಮತಗಳನ್ನು ಗಳಿಸಿದ್ದರೂ ಸೋಲಲು ಕಾರಣಗಳನ್ನು ಕಂಡುಕೊಳ್ಳಲು ಸಮಿತಿ ಬಂದಿದೆ. ಅಲ್ಲದೇ ಮುಂದೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತದೆ ಎಂದರು.
ದೇಶ ಹಾಗೂ ರಾಜ್ಯದ ರಾಜಕೀಯ ಸಂದಿಗ್ಧತೆಯಲ್ಲಿದೆ. ಯಾವುದೇ ಸಮಯದಲ್ಲಿ ಜಿಪಂ, ತಾಪಂ ಹಾಗೂ ಬಿಬಿಎಂಪಿ ಚುನಾವಣೆ ನಡೆಯ ಬಹುದು. ಇದಕ್ಕಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ವಿಚಾರದಲ್ಲಿ ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿ ಸತ್ಯಶೋಧನಾ ಸಮಿತಿ ವರದಿಯನ್ನು ನೀಡಬೇಕಾಗಿದೆ. ಇದರೊಂದಿಗೆ ಎರಡನೇ ಹಂತದ ನಾಯಕರನ್ನು ಗುರುತಿಸಿ ಬೆಳೆಸುವ ಯೋಜನೆಯೂ ಇದೆ ಎಂದವರು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವೈಫಲ್ಯಕ್ಕೆ, ನಿರೀಕ್ಷಿತ ಸೀಟುಗಳು ಬರದಿರಲು ಏನೇನು ಕಾರಣಗಳನ್ನು ಸಮಿತಿ ಕಂಡುಕೊಂಡಿದೆ ಎಂದು ಉಗ್ರಪ್ಪರನ್ನು ಪ್ರಶ್ನಿಸಿದಾಗ, ನಾವು ಸಂಗ್ರಹಿಸಿದ ಮಾಹಿತಿಗಳನ್ನು ಕೆಪಿಸಿಸಿಗೆ ವರದಿಯ ರೂಪದಲ್ಲಿ ನೀಡುತ್ತೇವೆ. ಅವುಗಳ ಸಾರ್ವಜನಿಕ ಚರ್ಚೆ ಸರಿಯಲ್ಲ. ಸೋಲಿಗೆ ಕಾರಣಗಳನ್ನು ಪಕ್ಷದ ಚೌಕಟ್ಟಿನಲ್ಲಿ ನಡೆಸುತ್ತೇವೆ. ಇಲ್ಲಿ ಅವುಗಳನ್ನು ಬಹಿರಂಗವಾಗಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಮುಂದೆ ಪಕ್ಷ, ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಬಹುದು ಎಂದರು.
ಕಳೆದ ಚುನಾವಣೆ ಮಿ.ಮೋದಿ ಮಹಾನ್ ಸುಳ್ಳುಗಾರ ಹಾಗೂ ಮಹಾನ್ ಸಮಯಸಾಧಕ ರಾಜಕಾರಣಿ ಎಂಬುದನ್ನು ಜಗಜ್ಜಾಹೀರು ಪಡಿಸಿದೆ. ಮೋದಿ ಒಬ್ಬ ಸ್ಟೇಟ್‌ಮನ್ ಎನಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಅಚಲ್ ಬಿಹಾರಿ ವಾಜಪೇಯಿ ಅವರಂತೆ ಮುತ್ಸದ್ದಿ ರಾಜಕಾರಣಿಯಾಗುವ ಅವಕಾಶವೂ ಅವರಿಗಿತ್ತು. ನೆಹರೂರಿಂದ ಹಿಡಿದು ಡಾ.ಮನಮೋಹನ್ ಸಿಂಗ್‌ವರೆಗೆ ನಮ್ಮೆಲ್ಲಾ ಪ್ರಧಾನಿಗಳು ಮುತ್ಸದಿ ರಾಜಕಾರಣ ಮಾಡಿದ್ದರು. ಆದರೆ ಮೋದಿ ಈ ಮಟ್ಟಕ್ಕೇರಲೇ ಇಲ್ಲ ಎಂದು ಉಗ್ರಪ್ಪ ನುಡಿದರು.
ಮೋದಿ ವಿರೋಧ ಪಕ್ಷದ ಮೇಲೆ ಸೇಡಿನ ರಾಜಕೀಯ ಮಾಡುತಿದ್ದಾರೆ. ಮಿ.ಮೋದಿ ಹಾಗೂ ಅಮಿತ್ ಶಾ ಅವರ ನಿರ್ದೇಶನದ ಮೇಲೆ ವಿಪಕ್ಷಗಳ ಸರಕಾರದ ಮೇಲೆ ಹಾಗೂ ಸರಕಾರದ ನಾಯಕರ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಉಗ್ರಪ್ಪ, ಮಾತೆತ್ತಿದರೆ ಕುಮಾರಸ್ವಾಮಿ ಸಿದ್ಧರಾಮಯ್ಯ ಸರಕಾರ ಹೋಗುತ್ತೆ, ಹೋಗುತ್ತೆ ಎನ್ನುತ್ತಾರೆ. ೧೩೬ಶಾಸಕರು ಜನರಿಂದ ಆಯ್ಕೆಯಾಗುವ ಮೂಲಕ ಬಹುಮತ ಪಡೆದಿರುವ ಸರಕಾರದ ವಿರುದ್ಧ ಇವರು ಕುತಂತ್ರ ರಾಜಕಾರಣ ಮಾಡುತ್ತಿರುವ ಸಂಶಯ ಬರುವುದಕ್ಕೆ ಇದೇ ಕಾರಣ. ಇವರೆಲ್ಲರೂ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸಯ್ಯದ್ ಅಹ್ಮದ್, ಮಾಜಿ ಸಚಿವ ಅಜಯ್‌ಕುಮಾರ್ ಸರನಾಯಕ, ಎಂ.ಎಸ್.ಮುಹಮ್ಮದ್, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಂ.ಎ.ಗಫೂರ್, ಪ್ರಸಾದ್‌ರಾಜ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.