ಉಡುಪಿ: ಆ.1 ರಿಂದ 11- ” ಕೈಮಗ್ಗ ಸೀರೆಗಳ ಉತ್ಸವ-2024″

ಉಡುಪಿ ಜು.30 :ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಹಾಗೂ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವತಿಯಿಂದ ‘ಕೈಮಗ್ಗ ಸೀರೆಗಳ ಉತ್ಸವ-2024’ನ್ನು ಆ.1ರಿಂದ 11ರವರೆಗೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಆ.1ರಂದು ಬೆಳಿಗ್ಗೆ 9.30ಕ್ಕೆ ಮೇಳವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಆ.೪ರಂದು ಬೆಳಿಗ್ಗೆ 9.30ಕ್ಕೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಆ ಬಳಿಕ ಸಾರ್ವಜನಿಕರಿಗಾಗಿ ಶ್ರೀಕೃಷ್ಣಲೀಲೋತ್ಸವ ಗೋಪಿಕೆಯರೊಂದಿಗೆ ಮುದ್ದುಕೃಷ್ಣ / ಬಾಲಕೃಷ್ಣನ ಬಾಲ ಲೀಲೆಗಳನ್ನೊಳಗೊಂಡ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಆ.7ರಂದು ಬೆಳಿಗ್ಗೆ 9.30ಕ್ಕೆ ಉಡುಪಿ ಬ್ರಾಂಡ್ ಲಿನನ್ ಶರ್ಟಿಂಗ್ ಅನಾವರಣ, ಉಡುಪಿ ಹ್ಯಾಂಡ್ ಲೂಮ್ ವರ್ಲ್ಡ್‌ನ ಕೈಮಗ್ಗ ಪ್ರೀಮಿಯಂ ಸೀರೆಗಳ ಬಿಡುಗಡೆ, ನೂತನ ಬ್ಯಾಚ್‌ನ ಉದ್ಘಾಟನೆ ಹಾಗೂ ಎರಡೂವರೆ ಲಕ್ಷ ರೂ. ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ನಡೆಯಲಿದೆ.  ಹಾಗೂ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನೇಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಆ.10 ರಂದು ಬೆಳಿಗ್ಗೆ 10ಗಂಟೆಗೆ ತುಳುನಾಡ ವೈಭವ ಎಂಬ ಶೀರ್ಷಿಕೆಯಡಿ ಕೈಮಗ್ಗ ಸೀರೆಗಳನ್ನುಟ್ಟು ವೈಯಕ್ತಿಕ, ದಂಪತಿ, ತಂಡ ವಿಭಾಗಗಳಲ್ಲಿ ಸೌಂದರ್ಯ ಸ್ಪರ್ಧೆ ಜರುಗಲಿದೆ. ಆ.11ರಂದು ಬೆಳಿಗ್ಗೆ 9.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ವೇಳೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೂ ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಆ.5:ರಿಂದ 9 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕುಣಿತ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆ.4 ರಿಂದ 10 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಶಿಖರೋಪನ್ಯಾಸ ಮಾಲಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿ ಅಧ್ಯಕ್ಷ ಚಂದನ್ ಶೆಟ್ಟಿಗಾರ್, ಕಾರ್ಯಾಧ್ಯಕ್ಷ ಮಂಜುನಾಥ್ ಮಣಿಪಾಲ್, ಕಾರ್ಯದರ್ಶಿ ಅವಿನಾಶ್ ಶೆಟ್ಟಿಗಾರ್, ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜ ಯಶವಂತ್, ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿಗಾರ್, ಪದಾಧಿಕಾರಿಗಳಾದ ವಿಠಲ ಶೆಟ್ಟಿಗಾರ್, ರಾಜಕೇಸರಿ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್ ಅಲೆವೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!