ಗ್ರಾಮೀಣ ಭಾಗದ ಜನರೇ ಕೊರೋನಾ ಗೆ ಹೆಚ್ಚು ಬಲಿ ಜಾಗೃತರಾಗಿರಿ :ಸುಧೀಂದ್ರ ಚಂದ್ರ ಸೂಡಾ ಎಚ್ಚರಿಕೆ

ಉಡುಪಿ ಮೇ.21( ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರ 40.83 ರಷ್ಟು ಹೆಚ್ಚಿದೆ ಎಂದ ಆತಂಕಕಾರಿ ಸುದ್ದಿಯೊಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದ ಜನರೇ ಕೊರೋನಾ ಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂಬುದು ಆಘಾತಕಾರಿ ವಿಚಾರವಾಗಿದೆ. ಈಗಾಗಲೇ ಗ್ರಾಮಾಂತರ ಪ್ರದೇಶದಲ್ಲಿ 208 ಮಂದಿ ಹಾಗೂ ನಗರ ಪ್ರದೇಶ 64 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಸುಧೀಂದ್ರ ಚಂದ್ರ ಸೂಡಾ ಅವರು ಮಾಹಿತಿ ನೀಡಿ 15 ದಿನಗಳಿಂದ 36.1 ಶೇ. ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರ ಕಳೆದ 3 ದಿನಗಳಿಂದ 40 ಶೇ. ದಷ್ಟು ಹೆಚ್ಚಾಗಿರೋದು ಕಂಡು ಬಂದಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದ್ದು ಜನರು ಇನ್ನಾದರೂ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಪಾಸಿಟಿವಿಟಿ ದರ ಕಡಿಮೆಮಾಡಬಹುದು ಎಂದು ಹೇಳಿದ್ದಾರೆ.