ಉಡುಪಿ: ಆ.1 ರಿಂದ ಸೆ.1 -ಶ್ರೀ ಕೃಷ್ಣ ಮಾಸೋತ್ಸವ

ಉಡುಪಿ, ಜು.29: ಶ್ರೀಕಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.1ರಿಂದ ಸೆ.1ರವರೆಗೆ ಒಂದು ತಿಂಗಳ ಪರ್ಯಂತ ಶ್ರೀಕೃಷ್ಣ ಮಾಸೋತ್ಸವ, ಕೃಷ್ಣಜನ್ಮಾಷ್ಟಮಿ ಶ್ರೀಕಷ್ಣ ಲೀಲೋತ್ಸವ, ಲಡ್ಡೋತ್ಸವ, ಸಾಮೂಹಿಕ ಡೋಲೋತ್ಸವ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ತಿಳಿಸಿದ್ದಾರೆ.

ಉಡುಪಿ ಕೃಷ್ಣ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ ಲಡ್ಡೋತ್ಸವದಲ್ಲಿ 108 ಬಗೆಯ ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುವುದು. ಜನ್ಮಾಷ್ಟಮಿಗೆ ಅನೇಕ ಬಗೆಯ ಲಡ್ಡು, ಚಕ್ಕುಲಿ ಮಾಡುವುದು ಸಂಪ್ರದಾಯ. ಕಾಲಕ್ರಮೇಣ ಈ ಸಂಪ್ರದಾಯ ಕ್ಷೀಣಿಸಿದೆ. ಈ ವೈಭವವನ್ನು ಮತ್ತೆ ಮರುಕಳಿಸುವ ನಿಟ್ಟಿ ನಲ್ಲಿ ಹಳೆ ಕಾಲದ ವಿವಿಧ ಬಗೆಯ ಲಡ್ಡುಗಳನ್ನು ಶ್ರೀ ಕೃಷ್ಣಗೆ ಅರ್ಪಣೆ ಮಾಡಲಾಗುವುದು ಎಂದರು.

ಆ.1ರಂದು ಸಂಜೆ 5ಗಂಟೆಗೆ ಮಾಸೋತ್ಸವದ ಉದ್ಘಾಟನೆ ನಡೆಯಲಿದ್ದು, ಈ ಸಮಾರಂಭದಲ್ಲಿ ಅದಮಾರು ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥ ಸ್ವಾಮೀಜಿ, ರಾಜ್ಯ ಗೃಹ ಸಚಿವ ಪರಮೇಶ್ವರ್ ಭಾಗವಹಿಸಲಿದ್ದಾರೆ ಎಂದರು

ಆ.22ರಿಂದ ಲಡ್ಡೋತ್ಸವ, ಆ.26ರಂದು ಜನ್ಮಾಷ್ಟಮಿ ದಿನ ಸಾಮೂಹಿಕ ತೊಟ್ಟಿಲು ಸೇವೆ, ಮುದ್ದುಕೃಷ್ಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 12.08ಕ್ಕೆ ಅರ್ಘ್ಯ ಪ್ರದಾನ ನಡೆಯಲಿದೆ. 27ರಂದು 3ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ, ರಥೋತ್ಸವ, ಹುಲಿವೇಷ ಕುಣಿತ ನಡೆಯಲಿದೆ. 28ರಂದು ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್, ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!