ಜು.30: ಪರಿಸರ ಮಾಲಿನ್ಯ ವಿರೋಧಿಸಿ ಎಂ11 ಇಂಡಸ್ಟ್ರೀಸ್ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ
ಉಡುಪಿ ಜು.29: ಎರಡು ತಿಂಗಳ ಹಿಂದೆ ಕಾಪುವಿನ ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾರಂಭಿಸಿರುವ ಎಂ11 ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿ ಮುಚ್ಚುವಂತೆ ಆಗ್ರಹಿಸಿ ಜು.30 ರಂದು ಪಡುಬಿದ್ರಿ ಜಿಪಂ ವ್ಯಾಪ್ತಿಯ ಪಲಿಮಾರು, ಇನ್ನಾ ಹಾಗೂ ಬಳ್ಕುಂಜೆ ಗ್ರಾಪಂಗಳ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡಿದ್ದಾರೆ ಎಂದು ಮಾಜಿ ತಾಪಂ ಸದಸ್ಯ ಲಕ್ಷ್ಮಣ್ ಶೆಟ್ಟಿ ಹಾಗೂ ಎಲ್ಲೂರು ಗ್ರಾಪಂ ಸದಸ್ಯ ನಾಗೇಶ್ ಭಟ್ ಅವರು ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ತಾಪಂ ಸದಸ್ಯ ಲಕ್ಷ್ಮಣ್ ಶೆಟ್ಟಿ ಅವರು, ನಂದಿಕೂರು ಗ್ರಾಮದ ದೇವರಕಾಡು ಪ್ರದೇಶದ ಸುಮಾರು 98 ಎಕರೆ ಜಾಗದಲ್ಲಿ ಕಾರ್ಯಾರಂಭವಾಗಿರುವ ಸಾವಿರಾರು ಟನ್ ಬಯೋ ಡೀಸೆಲ್, ಗ್ಲಿಸರಿನ್ ಹಾಗೂ ಎಡಿಬಲ್ ಆಯಿಲ್ ತಯಾರಿಸುವ ಈ ಕಂಪೆನಿ ಗ್ರಾಪಂನಿಂದ ಪರ ವಾನಿಗೆ ಪಡೆಯದೇ, ಕೇವಲ ರಾಜಕೀಯ ಪ್ರಭಾವದ ಮೂಲಕ ಎರಡು ತಿಂಗಳ ಹಿಂದಷ್ಟೇ ಕಾರ್ಯಾರಂಭ ಮಾಡಿದ್ದು, ಇದರಿಂದ ಈಗಾಗಲೇ ಉಂಟಾಗಿರುವ ಪರಿಸರ ಮಾಲಿನ್ಯ ಹಾಗೂ ಜಲ ಮಾಲಿನ್ಯದಿಂದ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಆರೋಪಿಸಿದರು.
ಇದರಿಂದ ಪರಿಸರದ ನಂದಿಕೂರು, ಪಲಿಮಾರು, ನಡ್ಸಾಲು, ಪಾದೆಬೆಟ್ಟು, ಎಲ್ಲೂರು, ಹೆಜಮಾಡಿ, ಇನ್ನಾ ಹಾಗೂ ಕರ್ನಿರೆ ಗ್ರಾಮಗಳ ವ್ಯಾಪ್ತಿಯಲ್ಲಿ ವಿಷಾನಿಲ ಹರಡುತಿದ್ದು, ರಾಸಾಯನಿಕ ಮಿಶ್ರಿತ, ತೈಲ ಬೆರೆತ ತ್ಯಾಜ್ಯವನ್ನು ಮಳೆ ನೀರು ಹರಿಯುವ ತೋಡಿಗೆ ನೇರವಾಗಿ ಬಿಡುತಿದ್ದು, ಇದರಿಂದ ಇಡೀ ಪರಿಸರದ ಜಲ ಮೂಲಗಳು ಮಾಲಿನ್ಯಗೊಂಡಿರುವುದು ಮಾತ್ರವಲ್ಲದೇ, ಈ ನೀರು ಶಾಂಭವಿ ನದಿಯ ಮೂಲಕ ಸಮುದ್ರವನ್ನು ಸೇರಿ ಅಲ್ಲಿನ ಜಲಚರಗಳಿಗೂ ಕಂಟಕ ಪ್ರಾಯವಾಗಿದೆ ಎಂದು ದೂರಿದರು.
ಘಟಕ ಕಾರ್ಯಾರಂಭ ಮಾಡುವ ವೇಳೆಯಲ್ಲಿ ಬರುವ ವಾಸನೆ ಸಹಿಸಲಸಾಧ್ಯವಾಗಿದ್ದು, ಇಲ್ಲಿನ ಆಸುಪಾಸಿನ ಜನರಿಗೆ ಬದುಕುವುದೇ ಕಷ್ಟವೆನಿಸಿದೆ. ಪರಿಸರದ ತೆರೆದ ಬಾವಿ, ಕೊಳವೆ ಬಾವಿ ಹಾಗೂ ಬೋರ್‌ವೆಲ್ ಗಳು ಸಹ ಕಲುಷಿತ ಗೊಂಡಿದ್ದು, ಅದರಲ್ಲಿ ತೈಲ ಮಿಶ್ರಿತ ನೀರು ಬರುತ್ತಿದೆ. ಇದರಿಂದ ಅಂಗನವಾಡಿ ಹಾಗೂ ಶಾಲಾ ಮಕ್ಖಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿದ್ದು, ತಲೆಸುತ್ತುವಿಕೆ, ವಾಂತಿಬೇಧಿ ಯಂಥ ಸಮಸ್ಯೆಗೆ ತುತ್ತಾಗುತಿದ್ದಾರೆ. ಆದರೆ ಯಾವುದನ್ನೂ ಲೆಕ್ಕಿಸದೇ ಕಂಪೆನಿ ಪರಿಸರ ವಿರೋಧಿಯಾಗಿ ಕಾರ್ಯ ಮುಂದುವರಿಸುತ್ತಿದೆ. ಈ ನಡುವೆ ಪಲಿ ಮಾರು ಗ್ರಾಪಂ ಜು.18ರಂದು ವಿಶೇಷ ಗ್ರಾಮ ಸಭೆ ನಡೆಸಿ ಕಂಪೆನಿಯನ್ನು ನಿಲ್ಲಿಸುವ ಹಾಗೂ ಪಲಿಮಾರು ಸಿಹಿ ನೀರಿನ ಕಿಂಡಿ ಅಣೆಕಟ್ಟಿನಿಂದ ದಿನಕ್ಕೆ ೪ ಲಕ್ಷ ಲೀ.ನೀರನ್ನು ಕಂಪೆನಿಗೆ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಇದಕ್ಕಾಗಿ ನಡೆದಿರುವ ಪೈಪ್‌ಲೈನ್ ಕಾಮಗಾರಿಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಹಾಗೂ ಇದೀಗ ಮಾಲಿನ್ಯಕಾರಕ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ನಾಳೆ ಪಡುಬಿದ್ರಿ ಜಿಪಂ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಪಕ್ಷಾತೀತ ನೆಲೆಯಲ್ಲಿ ಒಂದಾಗಿ ಎಂ11 ಕಂಪೆನಿಯ ಮುಂಭಾಗದಲ್ಲಿ ನಂದಿಕೂರು ಸುಪ್ರಿಯ ನರ್ಸರಿ ಬಳಿ ಬೃಹತ ಪ್ರತಿಭಟನೆ ನಡೆಸಲಿದ್ದು, ಸರಕಾರ, ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಎಲ್ಲೂರು ಗ್ರಾಪಂ ಸದಸ್ಯ ನಾಗೇಶ್ ಭಟ್ ಅವರು ಮಾತನಾಡಿ, ಈ ಬಗ್ಗೆ ಗ್ರಾಮ ಪಂಚಾಯತ್, ಜಿಲ್ಲಾಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳಿಗೆ ಮನವಿಗಳನ್ನು ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರಿಗೆ ಕಂಪೆನಿಯಿಂದ ಎದುರಾದ ಸಮಸ್ಯೆಗಳಿಗೆ ಪರಿಹಾರವೇ ದೊರೆಯುತ್ತಿಲ್ಲ ಎಂದರು.
ನಮ್ಮ ದೂರು, ಮನವಿಯ ಬಳಿಕ ಕಳೆದ ತಿಂಗಳ ಕೊನೆಗೆ ಪರಿಸರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಂಪೆನಿಗೆ ಶೋಕಾಸ್ ನೋಟೀಸ್ ನೀಡಿದ್ದರು. ಮತ್ತೂ ಸಮಸ್ಯೆ ಮುಂದುವರಿದಾಗ ಪರಿಸರ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜು.೩ರಂದು ಕಂಪೆನಿ ಉತ್ಪಾದನೆ ಸ್ಥಗಿತಗೊಳಿಸುವಂತೆ ಎರಡನೇ ನೊಟೀಸು ನೀಡಿದ್ದು, ಆಗಲೂ ಸಮಸ್ಯೆ ತೀವ್ರಗೊಂಡಾಗ ಕಂಪೆನಿಯನ್ನು ಮುಚ್ಚುವ ಆದೇಶ ನೀಡಿದ್ದರೂ ಅದು ಜಾರಿಯಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಮಾಜಿ ತಾಪಂ ಸದಸ್ಯ ದಿನೇಶ್ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.