ಉಡುಪಿ: ಡಯಾಲಿಸಿಸ್ ರೋಗಿಗೆ ಆಸರೆಯಾದ ಯಶೋದ ಆಟೋ ಯೂನಿಯನ್
ಉಡುಪಿ ಜು.29(ಉಡುಪಿ ಟೈಮ್ಸ್ ವರದಿ): ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರುಗಳು ಮತ್ತು ದೆಂದುರುಕಟ್ಟೆ ಆಟೋ ನಿಲ್ದಾಣದ ಸದಸ್ಯರುಗಳು ನೊಂದ ಅನಾರೋಗ್ಯ ಪೀಡಿತ ಒಂದು ಬಡ ಕುಟುಂಬಕ್ಕೆ ಆಸರೆಯಾಗಲು ಮುಂದಾಗಿದ್ದಾರೆ.
ಬಡ ಕುಟುಂಬದ ಡಯಾಲಿಸಿಸ್‌ನ ಪೇಷೆಂಟ್‌ವೊಬ್ಬರಿಗೆ ಆಸ್ಪತ್ರೆಗೆ ತೆರಳಲು ಮತ್ತು ಆಸ್ಪತ್ರೆಯಿಂದ ಮನೆಗೆ ಮರಳಲು ನೆರವಾಗುವ ಉಚಿತ ಅಟೋ ಸೇವೆಗೆ ಯಶೋಧ ಆಟೋ ಯೂನಿಯನ್‌ನ ಜಿಲ್ಲಾ ಅಧ್ಯಕ್ಷರಾದ ಕೆ.ಕೃಷ್ಣ ಮೂರ್ತಿ ಆಚಾರ್ಯ ಅವರು ಚಾಲನೆ ನೀಡಿದರು.
ಉಡುಪಿಯ ದೆಂದುರುಕಟ್ಟೆಯ ಬಡ ಕುಟುಂಬದ ಪ್ರವೀಣ್ ರವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ವಾರದಲ್ಲಿ ಎರಡು ಮೂರು ದಿನ ಡಯಾಲಿಸಿಸ್ ನ ಅಗತ್ಯವಿದ್ದು ವಾರಕ್ಕೆ ಎರಡು ಮೂರು ಬಾರಿ ಆಸ್ಪತ್ರೆಗೆ ಬಂದು ಹೋಗಲು ಕಷ್ಟವಾಗುತ್ತಿತ್ತು. ಹಾಗೂ ಖರ್ಚು ನಿರ್ವಹಿಸಲೂ ಅಸಾಧ್ಯವಾದುದರಿಂದ ಅವರಿಗೆ ವರ್ಷ ಪೂರ್ತಿ ಉಡುಪಿಯ ದೆಂದುರುಕಟ್ಟೆ ಮನೆಯಿಂದ ನ್ಯೂ ಸಿಟಿ ಆಸ್ಪತ್ರೆಗೆ ಮತ್ತು ಡಯಾಲಿಸಿಸಿ ಆದಮೇಲೆ ವಾಪಸ್ ಮನೆಗೆ ಹೋಗಲು ಯಶೋದ ಆಟೋ ಸಂಘದ ವತಿಯಿಂದ ಮತ್ತು ದೆಂದುರುಕಟ್ಟೆ ಆಟೋ ಚಾಲಕರಿಂದ ಉಚಿತ ಆಟೋ ಸೇವೆ ಮಾಡಬಹುದೇ ಎಂದು ಕೇಳಿಕೊಳ್ಳಲಾಯಿತು. ಅದರಂತೆಯೇ ಈ ಉಚಿತ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನ್ಯೂ ಸಿಟಿ ಹಾಸ್ಪಿಟಲ್ ನ ಡಾಕ್ಟರ್ಸ್ ಮತ್ತು ದೆಂದೂರು ಕಟ್ಟೆ ಆಟೋ ಸ್ಟ್ಯಾಂಡಿನ ಅಧ್ಯಕ್ಷರಾದ ಅಶೋಕ್ ಶೆಟ್ಟಿ , ಇಂದ್ರಾಳಿ ರೈಲ್ವೆ ಆಟೋ ಸ್ಟ್ಯಾಂಡಿನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಯಶೋಧ ಆಟೋ ಯೂನಿಯನ್ ನ ಹರೀಶ್ ಅಮೀನ್, ಶ್ರೀನಿವಾಸ ಕಪ್ಪೆಟ್ಟು,ಸದಾಶಿವ ಪೂಜಾರಿ ದೆಂದೂರು ಕಟ್ಟೆ , ರವಿ ಸೇರಿಗಾರ್, ಪ್ರಸಾದ್ ತಂತ್ರಿ, ನಾಗರಾಜ್ ಕಾಮತ್, ಸಂತೋಷ್ ಚಿಪ್ಪಾಡಿ, ರಾಜೇಶ್ ಶೆಟ್ಟಿ ಉಡುಪಿ, ನಾರಾಯಣ್, ಪ್ರವೀಣ್, ರಾಜೇಶ್, ದೇವರಾಜ್ ಉಪಸ್ಥಿತರಿದ್ದರು