ಕೊರಗ ಸಮುದಾಯದ ಭೂಮಿ ಹಕ್ಕಿನ ಹೋರಾಟಕ್ಕೆ ದಸಂಸ ಬೆಂಬಲ, ಶಾಸಕರ ಭೇಟಿ -ಬೇಡಿಕೆ ಈಡೇರಿಕೆಯ ಭರವಸೆ

ಉಡುಪಿ ಜು.27:  ಉದ್ಯೋಗ ಹಾಗೂ ಭೂಮಿ ಹಕ್ಕಿನ ಬೇಡಿಕೆಗಳನ್ನು ಮುಂದಿಟ್ಟು ಜು.22ರಿಂದ ಆರಂಭಗೊಂಡ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹವು 6ನೇ ದಿನವಾದ ಶನಿವಾರವೂ ಮುಂದುವರೆದಿದೆ. ಧರಣಿನಿರತರು ಹಗಲು ರಾತ್ರಿ ಸ್ಥಳದಲ್ಲೇ ಊಟ ಉಪಹಾರ ತಯಾರಿಸಿ, ಪೆಂಡಲ್‌ನಲ್ಲೇ ಮಲಗಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ಪ್ರತಿದಿನ ಸ್ಥಳಕ್ಕೆ ಬಂದು ಧರಣಿ ವಾಪಾಸ್ಸು ಪಡೆಯುವಂತೆ ಮನವಿ ಮಾಡಿದರೂ ಜಗ್ಗದ ಧರಣಿನಿರತರು, ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

ಕೊರಗ ಸಮುದಾಯದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಇಂದು ಭೇಟಿ ನೀಡಿ ಸಮುದಾಯದ ಬೇಡಿಕೆಗಳ ಬಗ್ಗೆ ಮುಖಂಡ ರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕೊರಗ ಸಮುದಾಯದ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಬೇಡಿಕೆಗಳ ಈಡೇರಿಕೆ ಶಾಸಕನಾಗಿ ನನ್ನ ಕರ್ತವ್ಯವಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅತೀಶೀಘ್ರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಎಲ್ಲಾ ಶಾಸಕರು ಜೊತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವುದಾಗಿ ಶಾಸಕರು ತಿಳಿಸಿದರು.

ಈ ನಡುವೆ ಕೊರಗ ಸಮುದಾಯದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ಬೆಂಬಲ ಸೂಚಿಸಿದೆ. 

ಈ ಬಗ್ಗೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಅವರು, ರಾಜ್ಯ ಸರಕಾರ ಜಿಲ್ಲೆಯಲ್ಲಿರುವ ಕುಮ್ಕಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಆ ಭೂಮಿಯನ್ನು ಕೊರಗ ಸಮುದಾಯಕ್ಕೆ ಹಂಚುವ ಕಾರ್ಯ ಮಾಡಬೇಕು ಎಂದು  ಆಗ್ರಹಿಸಿದ್ದಾರೆ.

ಹಾಗೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳದ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಮಳೆಗಾಳಿ ಎನ್ನದೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿರುವ ಅವರು, ಇಲ್ಲಿ 5 ಎಕರೆ ಭೂಮಿ ಹೊಂದಿರುವ ಭೂಮಾಲಿಕರು 15-20 ಎಕರೆ ಜಾಗವನ್ನು ಕುಮ್ಕಿ ಎಂದು ಹೇಳಿ ಊರೆಲ್ಲ ಬೇಲಿ ಹಾಕಿ ಸರಕಾರದ ಜಾಗವನ್ನು ಕಬಳಿಸಿದ್ದಾರೆ. ಆ ಜಾಗವನ್ನು ಸರಕಾರ ತನ್ನ ವಶಕ್ಕೆ ಪಡೆದು ಭೂ ರಹಿತ ಸಮುದಾಯವಾಗಿರುವ ಕೊರಗರಿಗೆ ನೀಡಬೇಕು ಎಂದರು. 

ಹೊರಗಿನಿಂದ ಬಂದ ಆರ್ಯರು ಈ ದೇಶದ ಎಲ್ಲ ಭೂಮಿಯನ್ನು ಕಬಳಿಸಿದ್ದಾರೆ. ಇದರಿಂದ ಈ ದೇಶದ ಮೂಲನಿವಾಸಿಗಳಾದ ಬುಡುಕಟ್ಟು ಸಮುದಾಯ, ಆದಿ ದ್ರಾವಿಡರು, ದಲಿತರು ಇಲ್ಲಿ ನಮ್ಮದೇ ಭೂಮಿಗಾಗಿ ಹಗಲು ರಾತ್ರಿ ಮಳೆ ಚಳಿಯ ಮಧ್ಯೆಯೂ ಧರಣಿ ನಡೆಸುತ್ತಿರುವುದು ದುರಂತ. ನಮ್ಮ ಹೆಸರಿನಲ್ಲಿ ಭೂಮಿ ಇಲ್ಲದಿದ್ದರೆ ಆತ್ಮವಿಶ್ವಾಸವೇ ಇಲ್ಲದಂತೆ ಆಗುತ್ತದೆ. ಉನ್ನತ ಶಿಕ್ಷಣ ಪಡೆದ ಕೊರಗ ಸಮುದಾಯದ ಯುವ ಜನತೆ ಈಗ ಬೀದಿ ಬದಿಯಲ್ಲಿ ಕಸ ಗುಡಿ ಸುವ ಅನಿವಾರ್ಯತೆ ಬಂದೊದಗಿದೆ ಎಂದು ಆರೋಪಿಸಿದರು.

ಹಾಗೂ ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿದ ಅವರು, ಮುಂದೆ ಈ ಹೋರಾಟವನ್ನು ರಾಜ್ಯಮಟ್ಟದಲ್ಲಿ ರೂಪಿಸುವ ಬಗ್ಗೆ ನಮ್ಮ ಸಂಘಟನೆಯ ರಾಜ್ಯ ಮುಖಂಡರಲ್ಲಿ ಮಾತುಕತೆ ನಡೆಸಲಾಗುವುದು. ಅಲ್ಲದೇ ಸಮಾಜ ಕಲ್ಯಾಣ ಸಚಿವರನ್ನು ಕೂಡ ಭೇಟಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ವೇಳೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಕೊರಗ ಸಮುದಾಯದವರು ಮುಂದಿಟ್ಟಿರುವ ಉದ್ಯೋಗ ಹಾಗೂ ಭೂಮಿ ಹಕ್ಕಿನ ಬೇಡಿಕೆಗಳು ಅತೀ ಅಗತ್ಯವಾದುದು. ಇದನ್ನು ಸರಕಾರ ಈಡೇರಿಸಲೇ ಬೇಕು. ಸರಕಾರಿ ಉದ್ಯೋಗಕ್ಕಾಗಿ ಸ್ಪಧಾರ್ತ್ಮಕ ಪರೀಕ್ಷೆಗಳಲ್ಲಿ ಇತರ ಬಲಿಷ್ಠ ಜಾತಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದ ಕೊರಗ ಸಮುದಾಯಕ್ಕೆ ಸರಕಾರಿ ಉದ್ಯೋಗದಲ್ಲಿ ಶೇ.1 ರಷ್ಟಾದರೂ ಪ್ರತ್ಯೇಕ ಮೀಸಲಾತಿ ನೀಡಬೇಕು. ಸರಕಾರ ಈ ವಿಚಾರದಲ್ಲಿ ಅತೀ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ನಾಡ ಅವರು ಮಾತನಾಡಿ, ಕೊರಗ ಸಮುದಾಯದ ಯುವಜನತೆ ಉನ್ನತ ಶಿಕ್ಷಣ ಪಡೆದರೂ ಉದ್ಯೋಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳಿಗೆ ಶಿಕ್ಷಣ ನೀಡಿ ಏನು ಪ್ರಯೋಜನ ಇಲ್ಲ ಎಂಬ ಭಾವನೆ ನಮ್ಮವರಲ್ಲಿ ಮೂಡುತ್ತಿದೆ. ಇಲ್ಲಿ ಅಸ್ಪಶ್ಯತೆ ತೀವ್ರವಾಗಿ ಇದೆ. ಈ ಹಿಂಸೆ, ಶೋಷಣೆ ಅನುಭವಿಸಿ ನಮಗೆ ಸಾಕಾಗಿದೆ. ನಾವು ಯಾವುದೇ ಕಾರಣಕ್ಕೂ ಹಿಂದಗೆದು ಕೊಳ್ಳುವುದಿಲ್ಲ. ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವ ಬಗ್ಗೆ ಉಸ್ತುವಾರಿ ಸಚಿವರು ಅಥವಾ ಉನ್ನತ ಅಧಿಕಾರಿಗಳು ಬಂದು ಭರವಸೆ ಕೊಡುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಧರಣಿಯಲ್ಲಿ ದಸಂಸ ಮುಖಂಡರಾದ ಶ್ರೀನಿವಾಸ ವಡ್ಡರ್ಸೆ, ಶ್ಯಾಂ ಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ, ಹರೀಶ್‌ಚಂದ್ರ ಬಿರ್ತಿ, ಶಿವಾನಂದ ಮೂಡಬೆಟ್ಟು, ಶಿವಾನಂದ ಬಿರ್ತಿ, ಶ್ರೀಧರ್ ಕುಂಜಿಬೆಟ್ಟು, ಕೊರಗ ಸಂಘಗಳ ಒಕ್ಕೂಟದ ಮುಖಂಡರಾದ ವಿನಯ ಅಡ್ವೆ, ದಿವಾಕರ ಕಳ್ತೂರು, ಪವಿತ್ರಾ ಮಧುವನ, ಕುಮಾರ್‌ ದಾಸ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!