ಕನ್ನಡಿಗರ ಉದ್ಯೋಗ ಮೀಸಲಾತಿಗೆ ತಡೆ ನೀಡಿದ ಕ್ರಮ ಸರಿಯಲ್ಲ: ಕ.ರ.ವೇ ಆಕ್ರೋಶ
ಉಡುಪಿ ಜು.25(ಉಡುಪಿ ಟೈಮ್ಸ್ ವರದಿ): ಕನ್ನಡಿಗರ ಉದ್ಯೋಗ ಮೀಸಲಾತಿಗೆ ತಡೆ ನೀಡಿದ ಕ್ರಮ ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ.ರ.ವೇ. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಲು ಅಧಿವೇಶನದಲ್ಲಿ ಅಂಗೀಕಾರ ಮಾಡಿದ್ದು ಕೆಲವು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ಈಗ ತಡೆ ಹಿಡಿದಿರುವುದು ಖಂಡನೀಯ ಎಂದಿದ್ದಾರೆ.
ರಾಜ್ಯದಲ್ಲಿನ ಉದ್ಯಮಿಗಳು ಸರ್ಕಾರದ ಎಲ್ಲಾ ಸವಲತ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಂಡು ಬೆಂಗಳೂರಿನಂತ ನಗರದಲ್ಲಿ ಬೃಹತ್ ಕಂಪೆನಿಗಳನ್ನ ನಡೆಸುತ್ತ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇವರು ಕನ್ನಡಿಗರಿಗೆ ಉದ್ಯೋಗ ಕೊಡುವುದಕ್ಕೆ ಮೀನಾಮೇಶ ಎಣಿಸುತ್ತಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಕನ್ನಡಿಗರಿಗೆ ಕೌಶಲ್ಯ ಅಭಿವೃದ್ಧಿ ಇಲ್ಲ ಎಂದು ಕುಂಟು ನೆಪ ಹೇಳುತ್ತಾರೆ. ಆದರೆ ಇದೇ ಕನ್ನಡಿಗರನ್ನ ಅಮೆರಿಕ ಯುರೋಪ್ ಇಂಗ್ಲೆಂಡ್ ಜರ್ಮನಿಯಲ್ಲಿನ ದೊಡ್ಡ ದೊಡ್ಡ ಕಂಪನಿಗಳಲ್ಲಿಉದ್ಯೋಗಕ್ಕಾಗಿ ಆಹ್ವಾನಿಸಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿನ ನಮ್ಮ ಮತ್ತು ಹೊರ ರಾಜದಿಂದ ಬಂದಂತ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಕೊಡುವಲ್ಲಿ ವಿಫಲವಾಗಿವೆ ಎಂದು ಹೇಳಿದ್ದಾರೆ.
ಕಳೆದ 25 ವರ್ಷಗಳಿಂದ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಕೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಯಾವ ಸರ್ಕಾರವು ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕಳೆದ ಜುಲೈ 1 ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಂತ ಪ್ರತಿಭಟನೆ ಮಾಡಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅಧಿವೇಶನದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆ ಮಂಡಿಸಲು ಮತ್ತು ಕಾನೂನು ರೂಪಿಸಲು ಮುಂದಾಗಿದ್ದರು. ಕೆಲವು ಕನ್ನಡದ ದ್ರೋಹಿಗಳು ಇದನ್ನು ವಿರೋಧಿಸಿದ್ದಾರೆ. ಇಂಥವರ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.