ಕುಣಿಯಲು ಬಾರದವ ರಂಗಸ್ಥಳ ವಾರೆ…ಎಂಬಂತಾಯಿತು ಶೋಭಾ ಕರಂದ್ಲಾಜೆ ಪಾಡು: ವಿನಯಕುಮಾರ್ ಸೊರಕೆ ಕಿಡಿ

ಉಡುಪಿ (ಉಡುಪಿ ಟೈಮ್ಸ್ ವರದಿ) :ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ನಿರ್ದಿಷ್ಟ ಸಮುದಾಯದ ಮೇಲೆ ಹೊರಿಸಿ ನುಣುಚಿಕೊಳ್ಳುವ ಚಾಳಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕಿಡಿ ಕಾರಿದ್ದಾರೆ.


ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆಯಬಾರದೆಂದು ಚರ್ಚುಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂಬ ಹೇಳಿಕೆ ನೀಡಿದ್ದು ಈ ಕುರಿತು ಕ್ರೈಸ್ತ ಸಮುದಾಯ ವಿರೋಧ ವ್ಯಕ್ತ ಪಡಿಸಿದ್ದು ಇದೀಗ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾ ಪ್ರಕಟಣೆಯಲ್ಲಿ ಕರಂದ್ಲಾಜೆ ಯವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

“ಇತ್ತೀಚೆಗೆ ಜಿಲ್ಲೆಗೆ ನೀಡಿದ ಅಪರೂಪದ ಭೇಟಿಯ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆಯವರು, ಕೋವ್ಯಾಕ್ಸಿನ್ ಲಸಿಕೆ ಪಡೆಯಬಾರದೆಂದು ಚರ್ಚುಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂಬ ಅಸಂಬದ್ಧ ಮತ್ತು ಅಸತ್ಯವಾದ ಹೇಳಿಕೆಯನ್ನು ನೀಡುವ ಮೂಲಕ ಇಡೀ ಕ್ರೈಸ್ತ ಸಮುದಾಯವನ್ನು ಸಂಸದೆಯು ನಿಂದಿಸಿರುವುದು ಆಕ್ಷಮ್ಯ ಮತ್ತು ಖಂಡನೀಯ
ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಇನ್ನೊಂದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದರೆ, ಇದೀಗ ಎರಡನೇ ಅಲೆಯ ನಿರ್ವಹಣೆಯಲ್ಲಾದ ತಮ್ಮ ವೈಫಲ್ಯವನ್ನು ಮರೆಮಾಚಲು ಕ್ರೈಸ್ತ ಸಮುದಾಯದವನ್ನು ಗುರಿಯಾಗಿಸಿ ನಿಂದನಾರ್ಹ ಹೇಳಿಕೆ ನೀಡುವ ಮೂಲಕ ಸಂಸದೆ ಮತ್ತೊಮ್ಮೆ ತನ್ನೊಳಗಿರುವ ಅಲ್ಪಸಂಖ್ಯಾತ ವಿರೋಧಿ ನಂಜನ್ನು ಹೊರ ಹಾಕಿದ್ದಾರೆ.

ಕೊರೊನಾ ನಿರ್ವಹಣೆ ಹಾಗೂ ವ್ಯಾಕ್ಸಿನೇಶನ್ ಕೊಡಿಸುವುದರ ಬಗ್ಗೆ ಜನತೆಯ ಪರವಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿ ಕಾರ್ಯನಿರ್ವಹಿಸುವುದನ್ನು ಬಿಟ್ಟು , ಕಾಟಾಚಾರಕ್ಕಾಗಿ ಕ್ಷೇತ್ರಕ್ಕೆ ಭೇಟಿಯಿತ್ತು ಒಂದಲ್ಲ ಒಂದು ವಿವಾದಾಸ್ಪದ ಹೇಳಿಕೆಯನ್ನು ನೀಡಿ ಜಾತಿ-ಧರ್ಮದ ಮಧ್ಯೆ ಕಂದಕವನ್ನು ಸೃಷ್ಟಿಸಿ ಜಿಲ್ಲೆಯ ಸಾಮರಸ್ಯವನ್ನು ಕೆಡಿಸುವ ತನ್ನ ಚಾಳಿಯನ್ನು ಬಿಟ್ಟು ಜನರ ಜೀವ ಉಳಿಸುವ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುವುದು ಸಮಂಜಸ ಎಂದು ಮಾಜಿ ಸಚಿವರು ಹೇಳಿದ್ದಾರೆ.
ದೇಶದ ಅಭಿವೃದ್ಧಿಗಾಗಿ ವಿಶೇಷವಾಗಿ ಹಲವಾರು ಪ್ರಸಿದ್ಧ ಹಾಗೂ ಪ್ರಮುಖ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಹಲವಾರು ವೈದ್ಯಕೀಯ ಶಿಕ್ಷಣ ಕೇಂದ್ರಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವುದರ ಮೂಲಕ ದೇಶಕ್ಕೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ.

ಪ್ರಸ್ತುತ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ದೇಶದ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯ ಗಳು ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿ ಛೀಮಾರಿ ಹಾಕಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸರ್ಕಾರವು ಟೀಕೆಗೆ ಗುರಿಯಾಗಿದೆ. ಜನ ಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆಯಲು ತನ್ನ ಸಂಸದರಿಗೆ ಸರ್ಕಾರವು ನೀಡಿರುವ ಸೂಚನೆಯಂತೆ ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ವಿನಯ ಕುಮಾರ್ ಸೊರಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!