ಹೆಬ್ರಿ : ಭಾರಿ ಮಳೆ -ಹೊಳೆಯಲ್ಲಿ ಕೊಚ್ಚಿ ಹೋದ ಕೂಲಿ ಕಾರ್ಮಿಕ
ಹೆಬ್ರಿ ಜು.18(ಉಡುಪಿ ಟೈಮ್ಸ್ ವರದಿ) : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೆಬ್ರಿಯ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ಕೂಲಿ ಕಾರ್ಮಿಕರೊಬ್ಬರು ಕೊಚ್ಚಿ ಹೋದ ಘಟನೆ ಇಂದು ಸಂಜೆ ನಡೆದಿದೆ.
ತುಮಕೂರು ಮೂಲದ ಕೃಷಿ ಕೂಲಿ ಕಾರ್ಮಿಕ ಕರಿಯಪ್ಪ (55) ನೀರಿನಲ್ಲಿ ಕೊಚ್ಚಿ ಹೋದವರು. ಇವರು ನಾಡ್ಪಾಲಿನ ಮನೋರಮಾ ಹೆಗ್ಡೆ ಎಂಬವರಿಗೆ ಸೇರಿದ ತೋಟದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು. ಇವರಿಗೆ ತಾನು ಕೆಲಸ ಮಾಡುವ ಮನೆಗೆ ತೆರಳಲು ಉಪನದಿಯನ್ನು ದಾಟಿ ಹೋಗಬೇಕಿದೆ. ಅದರಂತೆ ಇಂದು ಸಂಜೆ ಉಪನದಿಗೆ ದಾಟಲು ಕಾಲು ಸಂಕ ಸಹಿತ ಯಾವೂದೇ ವ್ಯವಸ್ಥೆ ಇರಲಿಲ್ಲ. ಹಗ್ಗದ ಸಹಾಯದಿಂದ ಹೊಳೆ ದಾಟುವಾಗ ಹಗ್ಗ ತುಂಡಾಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಲ್ಲಿ ತೋಟದ ಮನೆಯಿಂದ ಹೊಳೆ ದಾಟಿ ಬರಲು ಕಾಲುಸಂಕ ಸಹಿತ ಯಾವೂದೇ ಮೂಲ ಸೌಕರ್ಯವನ್ನು ಈ ತನಕ ಕಲ್ಪಿಸಲಾಗಿಲ್ಲ. ಹಾಗಾಗಿ ಘಟನೆ ಸಂಭವಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಸ್ಥಳಕ್ಕೆ ಹೆಬ್ರಿ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಮಹೇಶ್ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.