ಉಡುಪಿ : ಶಾಲಾ ಶೌಚಾಲಯ ಸ್ವಚ್ಛತೆಗೆ ಸಿಬ್ಬಂದಿಗಳ ನಿಯೋಜನೆ: ಶಾಸಕ ಯಶ್ ಪಾಲ್ ಸುವರ್ಣ ಮನವಿ

ಉಡುಪಿ ಜು.18(ಉಡುಪಿ ಟೈಮ್ಸ್ ವರದಿ):  ಶಾಲಾ ಶೌಚಾಲಯ ಸ್ವಚ್ಛತೆಗೆ ಸ್ವಚ್ಛತಾ ಸಿಬ್ಬಂದಿಗಳ ನಿಯೋಜನೆ ಮಾಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಲಾ ಶಿಕ್ಷಣ  ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ರವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಶಾಲಾ ಶಿಕ್ಷಣ  ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ರವರಿಗೆ ಪತ್ರ ಬರೆದಿರುವ ಶಾಸಕರು, ಸರಕಾರಿ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ಸ್ವಚ್ಚತೆ ನಿರ್ವಹಣೆಗೆ ಸೂಕ್ತ ಸಿಬ್ಬಂದಿಗಳ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಭೋದನೆಯ ಜೊತೆಗೆ ಶೌಚಾಲಯ ನೈರ್ಮಲ್ಯದ ಹೊಣೆಗಾರಿಕೆಯನ್ನು ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಶಾಲೆಗಳ ಶೌಚಾಲಯ ಸ್ವಚ್ಚತೆಗೆ ಸ್ಥಳೀಯಾಡಳಿತದ ಮೂಲಕ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಶೌಚಾಲಯಗಳ ಸ್ವಚ್ಚತೆ ಅತೀ ಅವಶ್ಯವಾಗಿದ್ದು,  ಇತ್ತೀಚೆಗೆ ಕೆಲವು ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ವಿದ್ಯಾರ್ಥಿಗಳು ನಿರ್ವಹಿಸಿದ ಘಟನೆಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗಿದೆ. ಶೌಚಾಲಯಗಳ ಸ್ವಚ್ಛತೆಯನ್ನು ಶಾಲಾ ಮಕ್ಕಳ ಮೂಲಕ ಮಾಡಿಸುವುದು ಸಮಂಜಸವಾಗಿರುವುದಿಲ್ಲ. ಅಲ್ಲದೇ, ವಿದ್ಯಾರ್ಥಿಗಳಿಗೆ ಪಠ್ಯ ಭೋಧನೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಮತ್ತು ಉತ್ತಮ ಫಲಿತಾಂಶ ಹಾಗೂ ಮತ್ತಿತರ ಮಹತ್ತರ ಜವಾಬ್ದಾರಿ ಹೊಂದಿರುವ ಶಿಕ್ಷಕರಿಗೆ ಸ್ವಚ್ಛತಾ ಕಾರ್ಯದ ಜವಾಬ್ದಾರಿ ನೀಡುವುದು ಸರಿಯಲ್ಲ ಎಂದಿದ್ದಾರೆ.

ಶಾಲಾ ಶೌಚಾಲಯಗಳ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ ಹಾಗೂ ನಗರ ಸಭೆಗಳ ಮುಖಾಂತರ ಹೊರ ಗುತ್ತಿಗೆ ಸಿಬ್ಬಂದಿಗಳ ಮೂಲಕ ಸೂಕ್ತ ಅನುದಾನ ನೀಡಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಲು ಯೋಜನೆ ರೂಪಿಸಿ ಸ್ವಚ್ಛತೆಗೆ ಶಾಶ್ವತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!