ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಕಮೆಂಟ್ : ಉಡುಪಿ ವೈದ್ಯನ ವಿರುದ್ಧ ದೂರು

ಉಡುಪಿ, ಜು.15: ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಲು ಯತ್ನಿಸಿದ ಆರೋಪದಡಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ನ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಪೊಲೀಸ್ ಉಪನಿರೀಕ್ಷಕ(ನಿಸ್ತಂತು) ಅಜ್ಮಲ್ ಇಬ್ರಾಹಿಂ ಇ.ಎ. ನೀಡಿದ ದೂರಿನಂತೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದೂರು ದಾಖಲಾಗಿದೆ.

ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಉಪಾಧ್ಯ ಲಾನ್ಲಿ ಸ್ಟ್ರೇಂಜರ್ ಎಂಬ ಹೆಸರಿನ ಎಕ್ಸ್ ಖಾತೆಯನ್ನು ಹೊಂದಿದ್ದು, ಜು.13ರಂದು ಎಕ್ಸ್‌ನಲ್ಲಿ ಅಭಿ ಆ್ಯಂಡ್ ನೀಯು ಖಾತೆಯಿಂದ ‘ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?’ ಎಂಬುದಾಗಿ ಪ್ರಶ್ನಿಸ ಲಾಗಿತ್ತು. ಅದಕ್ಕೆ ಡಾ.ಉಪಾಧ್ಯ ತಮ್ಮ ಲೋನ್ಲಿ ಸ್ಟ್ರೇಂಜರ್ ಖಾತೆಯಿಂದ ‘ಮುಸ್ಲಿಂ ಕಮ್ಯುನಿಟಿ’ ಎಂದು ಪ್ರಚೋದನಕಾರಿಯಾಗಿ ಉತ್ತರಿಸಿದ್ದರು.

ಇದೀಗ ಅದರ ಸ್ಕ್ರೀನ್‌ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವೈದ್ಯರ ವಿರುದ್ಧ ಕ್ರಮಕ್ಕೆ ಕರ್ನಾಟಕ ಡಿಜಿಪಿಗೆ ಟ್ವೀಟ್ ಕೂಡ ಮಾಡಲಾಗಿದೆ.   

ಇವರು ತಮ್ಮ ದೂರಿನಲ್ಲಿ, ಈ ವಿಚಾರ ಜು.14ರಂದು ಸಂಜೆ 4:30ರ ಸುಮಾರಿಗೆ ಗಮನಕ್ಕೆ ಬಂದಿದ್ದು, ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡುವ ಮೂಲಕ ಧರ್ಮ- ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸಿದ ಲೋನ್ಲಿ ಸ್ಟ್ರೇಂಜರ್ ಖಾತೆಯನ್ನು ಹೊಂದಿರುವ ಡಾ.ಉಪಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಅವರು ತಿಳಿಸಿದ್ದಾರೆ.

ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಕಲಂ 196, 353ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!