ಶಂಕರಪುರ: ಕೃಷ್ಣವೇಣಿ ಆಶ್ರಯಧಾಮ, ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ

ಉಡುಪಿ ಜು.15(ಉಡುಪಿ ಟೈಮ್ಸ್ ವರದಿ): ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಾಪು ತಾಲೂಕಿನ ಶಂಕರಪುರದ ಸಾಲ್ಮರದಲ್ಲಿ ನಿರ್ಮಿಸಿರುವ ನೂತನ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯನ್ನು ಉಡುಪಿ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಅವರು, ಆಶ್ರಯಧಾಮ ಎನ್ನುವುದು ವಿದೇಶದ ಕಲ್ಪನೆಯಾದರೂ ನಮ್ಮ ಸಮಾಜಕ್ಕೆ ಅದರ ಅಗತ್ಯವಿದೆ. ಸಮಾಜ ಸೇವೆಯಲ್ಲಿ ದೇವರ ಸೇವೆ ಕಲ್ಪನೆಯಲ್ಲಿ ಆರಂಭವಾದ ಇವರ ಸೇವೆಯು ಯಶಸ್ಸು ಪಡೆಯಲಿ ಎಂದು ಆಶಿರ್ವದಿಸಿದರು.

ಈ ವೇಳೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಏಕಾಂಗಿ ಜೀವನದಲ್ಲೂ ಸಾಧನೆ ಮಾಡುತ್ತೇವೆ ಎನ್ನುವವರಿಗೆ ಈ ಆಶ್ರಮ ನೆಲೆಯಾಗುತ್ತದೆ. ಸಮಾಜದಲ್ಲಿ ಬರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವ ಶಕ್ತಿ, ಆತ್ಮಸ್ಥೈರ್ಯ ಬೇಕು. ಪ್ರಾಯ ಮಿತಿ ಮೀರಿದ್ದರೂ ಬದುಕಿನ ಜೀವನೋತ್ಸವಕ್ಕೆ ಈ ಆಶ್ರಯ ಧಾಮ ಶಕ್ತಿ ನೀಡುತ್ತದೆ.

ಹಾಗೂ ಮುಂದಿನ ದಿನಗಳಲ್ಲಿ ಕೃಷ್ಣ ವೇಣಿ ಆಯುರ್ವೇದ ಆಸ್ಪತ್ರೆಯು ಕಾಲೇಜು ಆಗಿ ಆಯುರ್ವೇದ ವೈದ್ಯರಾಗಬೇಕು ಎನ್ನುವವರ ಕನಸ್ಸು ನನಸಾಗಿಸುವ ಶಕ್ತಿಯಾಗಲಿ ಎಂದು ಶುಭ ಹಾರೈಸಿದರು.

ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹರಿದಾಸ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಿಟ್ಟೆ ಎನ್ಎಂಎಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್.ಚಿಪ್ಳೂಣ್ಕರ್, ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಸಿಇಒ ಡಾ.ಐ. ರಮೇಶ್ ಮಿತ್ತಂತಾಯ, ಕುರ್ಕಾಲು ಗ್ರಾಪಂ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಇನ್ನಂಜೆ ಗ್ರಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ, ಮಾಜಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯವೈದ್ಯಾಧಿಕಾರಿ ಡಾ.ಕೆ.ಲಕ್ಷ್ಮೀಶ್ ಉಪಾಧ್ಯಾಯ, ಅಮರನಾಥ್ ಭಟ್, ಗುರುರಾಜ್ ಭಟ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!