ಕಾಪು: ನೂತನ ತಾಲೂಕು ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಉಪಾಧ್ಯಕ್ಷ ಯು.ಸಿ ಶೇಖಬ್ಬ ಆಯ್ಕೆ

ಕಾಪು (ಉಡುಪಿ ಟೈಮ್ಸ್ ವರದಿ): ನೂತನ ಕಾಪು ತಾಲೂಕು ಪಂಚಾಯತ್ ಪ್ರಥಮ ಅಧ್ಯಕ್ಷರಾಗಿ ಬಿಜೆಪಿಯ ಶಶಿಪ್ರಭಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯು.ಸಿ ಶೇಖಬ್ಬ ಉಚ್ಚಿಲ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

ಆಗಸ್ಟ್ 10 ರಂದು ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆ ಫಲಿತಾಂಶ ಘೋಷಿಸದಂತೆ ತಡೆಹಿಡಿಯಲಾಗಿತ್ತು. ಅಕ್ಟೋಬರ್ 20 ಹೈಕೋರ್ಟ್ ಆದೇಶದಂತೆ ಚುನಾವಣಾಧಿಕಾರಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಅವರು ಮಂಗಳವಾರ ಫಲಿತಾಂಶ ಘೋಷಣೆ ಮಾಡಿದರು.

ಈ ನಡುವೆ ಹಿಂದುಳಿದ ವರ್ಗ ಅ ಮಹಿಳೆ ಅಭ್ಯರ್ಥಿ ಇಲ್ಲದ ಪಕ್ಷದಲ್ಲಿ ಬಿ ಮಹಿಳೆ ಅಭ್ಯರ್ಥಿ ಆಯ್ಕೆಗೆ ಅವಕಾಶವಿದೆ ಎಂಬ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರ ನೊಟೀಸ್ ನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ನೋಟೀಸ್ ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು.

ಸದ್ರಿ ಮೀಸಲಿನಂತೆ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಶಿಪ್ರಭಾ ಶೆಟ್ಟಿ ಮತ್ತು ಕಾಂಗ್ರೆಸ್ ನಿಂದ ರೇಣುಕಾ ಪುತ್ರನ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೇಶವ ಮೊಯ್ಲಿ, ಕಾಂಗ್ರೆಸ್ ನಿಂದ ಯು. ಸಿ. ಶೇಖಬ್ಬ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನ ರೇಣುಕಾ ಪುತ್ರನ್ ರವರ ನಾಮಪತ್ರ ತಿರಸ್ಕೃತವಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಶಶಿಪ್ರಭಾ ಏಕಮಾತ್ರ ಅಭ್ಯರ್ಥಿಯಾಗಿ ಉಳಿದಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಯು.ಸಿ ಶೇಖಬ್ಬ ಹಾಗು ಕೇಶವ ಮೊಯ್ಲಿ ಕಣದಲ್ಲಿದ್ದರು. ಯು.ಸಿ ಶೇಖಬ್ಬ 7 ಮತಗಳನ್ನು ಪಡೆದರೆ ಕೇಶವ ಮೊಯ್ಲಿ 5 ಮತಗಳನ್ನು ಪಡಿದಿದ್ದಾರೆ.

ಶಾಸಕ ಲಾಲಾಜಿ ಆರ್ ಮೆಂಡನ್, ತಹಶಿಲ್ದಾರ್ ಮುಹಮ್ಮದ್ ಇಸಾಖ್, ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಯೋಜನ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರ್, ತಾ.ಪಂ ಕಾರ್ಯ ನಿರ್ವಾಹಣ ಅಧಿಕಾರಿ ವಿವೇಕಾನಂದ ಗಾವ್ಕರ್,ಜಿ.ಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜಿ.ಪಂ ಶಿಲ್ಪಾ ಸುವರ್ಣ ಹಾಗು ಪ್ರಮುಖರು ಉಪಸ್ಥಿತರಿದರು.

Leave a Reply

Your email address will not be published. Required fields are marked *

error: Content is protected !!