ಶಿರೂರು ಪೀಠಾಧಿಪತಿಯಾಗಿ ಅಪ್ರಾಪ್ತ ಬಾಲಕನ ನೇಮಕ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ
ಬೆಂಗಳೂರು (ಉಡುಪಿ ಟೈಮ್ಸ್ ವರದಿ): ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ 16 ವರ್ಷದ ಬಾಲಕನ ನೇಮಕವಾಗಿದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿ ಹೈಕೋರ್ಟ್ ಆದೇಶಿಸಿದೆ.
ಶಿರೂರು ಮಠಕ್ಕೆ ನೂತನ ಯತಿಯಾಗಿ ಅನಿರುದ್ಧ ಸರಳತ್ತಾಯ ಎಂಬವರನ್ನು ನೇಮಕ ಮಾಡಲಾಗಿತ್ತು. ಸೋದೆ ವಾದಿರಾಜ ಮಠದಿಂದ ನೂತನ ಪೀಠಾಧಿಪತಿ ನೇಮಕ ಮಾಡಲಾಗಿತ್ತು. ಆದರೆ ಹೀಗೆ ಅಪ್ರಾಪ್ತರ ನೇಮಕ ಮಾಡುವಂತಿಲ್ಲವೆಂದು ತಕರಾರು ಕೇಳಿಬಂದಿದೆ. ಸೋದೆ (ವಾದಿರಾಜ) ಮಠದ ವಿಶ್ವವಲ್ಲಭ ತೀರ್ಥರು ನೂತನ ಪೀಠಾಧಿಪತಿಯ ಹೆಸರು ಘೋಷಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ನಿಡ್ಲೆ ಮೂಲದ ಅನಿರುದ್ಧ ಸರಳತ್ತಾಯ ಮುಂದಿನ ಶ್ರೀಗಳಾಗಿ ನಿಯುಕ್ತಿಗೊಂಡಿದ್ದಾರೆ.
‘ಅಷ್ಟಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಸಂಪ್ರದಾಯ ಇದೆ. ಸಂಪ್ರದಾಯದ ಪ್ರಕಾರವೇ ವಟುವಿನ ಆಯ್ಕೆ ನಡೆದಿದೆ. ಅಷ್ಟಮಠಗಳ ಯತಿಗಳಿಂದ ಸನ್ಯಾಸ ವಿಚಾರದಲ್ಲಿ ಯಾವುದೇ ಸಂವಿಧಾನ ರಚನೆಯಾಗಿಲ್ಲ. ಎಲ್ಲ ಯತಿಗಳ ಗಮನಕ್ಕೆ ತಂದು ಶಿಷ್ಯನ ಆಯ್ಕೆ ಮಾಡಿದ್ದೇವೆ’ ಎಂದು ಉಡುಪಿಯ ಶಿರೂರಿನಲ್ಲಿ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.