ಉದ್ಯಾವರ: ಉತ್ತಮ ಪ್ರಾಥಮಿಕ ಶಿಕ್ಷಣ ಜೀವನಕ್ಕೆ ಭದ್ರ ಬುನಾದಿ- ಪೂರ್ಣಿಮಾ

ಉದ್ಯಾವರ ಜೂ.30(ಉಡುಪಿ ಟೈಮ್ಸ್ ವರದಿ): ಉತ್ತಮ ಪ್ರಾಥಮಿಕ ಶಿಕ್ಷಣ ಜೀವನಕ್ಕೆ ಭದ್ರ ಬುನಾದಿಯನ್ನು ನೀಡುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಹೇಳಿದ್ದಾರೆ.

ಉದ್ಯಾವರ  ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಶಯದಲ್ಲಿ ಜರಗಿದ, ಶಾಲೆಯಲ್ಲಿ 41 ವರ್ಷಗಳ ಸುದೀರ್ಘ ಕರ್ತವ್ಯ ನಿರ್ವಹಿಸಿದ ನಿವೃತ್ತ ಮುಖ್ಯ ಶಿಕ್ಷಕಿ ಹೇಮಲತಾರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬನಿಗೂ ಸಾಕಷ್ಟು ಸವಾಲುಗಳಿವೆ. ಬದುಕಿನಲ್ಲಿ  ಶತ್ರುಗಳಿದ್ದಾರೆ. ಅದೇ ರೀತಿ ನಮ್ಮ ಸುತ್ತಲಿನ ಪ್ರಕೃತಿ ಯಲ್ಲಿ ಅತ್ಯಮೂಲ್ಯ ವಸ್ತುಗಳಿವೆ. ಈ ಸವಾಲುಗಳು, ಇರುವ ಶತ್ರುಗಳು, ಸುತ್ತಲಿನ ಅಮೂಲ್ಯ ವಸ್ತುಗಳಿಂದ ನಾವು ಅನೇಕ ವಿಷಯಗಳನ್ನು ಕಲಿಯಬಹುದು ಎಂದರು. 

ಹಾಗೂ ಅನೇಕ ವಿಷಯಗಳ ಕಲಿಕೆಗೆ ಪ್ರೇರಣೆ ನೀಡುವುದೇ ಪ್ರಾಥಮಿಕ ಶಿಕ್ಷಣ. ಸೂಕ್ಷ್ಮತನ ಸಂವೇದನೆಯಿಂದ ಕೂಡಿದ ಪ್ರಾಥಮಿಕ ಶಿಕ್ಷಣದಿಂದ ಉತ್ತಮ ಭವಿಷ್ಯವನ್ನು ಪಡೆಯಲು ಸಾಧ್ಯವಿದೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಉತ್ತಮವಾಗಿ ಸಿಗಬೇಕಾದ ಅನಿವಾರ್ಯತೆ ಕೂಡ ಇದೆ. ಇದರ ಗಂಭೀರತೆಯನ್ನು ಅರಿತುಕೊಂಡು ಶಿಕ್ಷಣ ಕೊಡುವಂತಹ ಸಂಸ್ಥೆಗಳು ಸಮಾಜದ ಆಸ್ತಿ. ಇಂತಹ ಶಾಲೆಗಳಲ್ಲಿ ಹಿಂದೂ ಶಾಲೆಯೂ ಒಂದು ಎನ್ನಲು ನನಗೆ ಹೆಮ್ಮೆಯಾಗುತ್ತದೆ. ಶಿಕ್ಷಣವನ್ನು ಪಡೆಯಲು ಈ ಶಾಲೆಯು  ನನಗೆ ಪ್ರೇರಣೆ ಮಾಡಿದೆ. ಇಲ್ಲಿಯ ಎಲ್ಲಾ ಶಿಕ್ಷಕರು ನನ್ನ ಜೀವನದಲ್ಲಿ ಮೂಲ ಮೌಲ್ಯಗಳನ್ನು ತುಂಬಿಸಿದ್ದಾರೆ. ಇಂದು ನಿವೃತ್ತಿ ಗೊಳ್ಳುತ್ತಿರುವ ಹೇಮ ಟೀಚರ್, ತಾಯಿಯ ಮಮತೆಯನ್ನು ಶಿಕ್ಷಕರ ಜವಾಬ್ದಾರಿಯನ್ನು ಅರಿತು ಪಾಠ ಮಾಡುವ ಶಿಕ್ಷಕಿ ಎಂದು ಹೇಳಿದರು.

ಈ ವೇಳೆ ಶಾಲೆಯ ಇನ್ನೋರ್ವ ಹಳೆ ವಿದ್ಯಾರ್ಥಿ ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ್ ಪೌಂಡೇಶನ್ ಇದರ ಪ್ರವರ್ತಕ ಸುನಿಲ್ ಸಾಲ್ಯಾನ್ ಕಡೆಕಾರು ಅವರು ಮಾತನಾಡಿ, ಮನುಷ್ಯನ ಬದುಕಿನಲ್ಲಿ ಶಿಕ್ಷಕರು ಮತ್ತು ವೈದ್ಯರು ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ ವೈದ್ಯರು ಜೀವವನ್ನು ಸುಸ್ಥಿತಿಯಲ್ಲಿಡಲು ಸಹಕರಿಸಿದರೆ ಶಿಕ್ಷಕರು ಜೀವನವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತಾರೆ. ಪ್ರಾಥಮಿಕ ಶಿಕ್ಷಣ ಉತ್ತಮವಾಗಿ ಲಭಿಸಿದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು.ಅಂತಹ ಶಿಕ್ಷಣ ಈ ಶಾಲೆಯಲ್ಲಿ ನನಗೆ ದೊರೆತಿದೆ. ತಾಯಿ ಹೃದಯದ ಹೇಮ ಟೀಚರ್ ನಮಗೆಲ್ಲ ತಾಯಿಯ ಮಮತೆಯನ್ನು ನೀಡಿ ಪ್ರಾಥಮಿಕ ಶಿಕ್ಷಣವನ್ನು ನೀಡಿದ್ದಾರೆ ಎಂದು ಶಾಲೆಯ ದಿನಗಳ ಅನುಭವವನ್ನು ನೆನಪಿಸಿಕೊಂಡರು.

ಸಮಾರಂಭದಲ್ಲಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಹೇಮಲತಾ ಹಾಗೂ ಅವರ ಪತಿ  ನಿವೃತ್ತ ಶಿಕ್ಷಕ ಕೃಷ್ಣ ಪೂಜಾರಿ  ದಂಪತಿಗಳಿಗೆ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ , ಶಾಲಾ ಹಳೆ ವಿದ್ಯಾರ್ಥಿ ಸಂಘ, ಮತ್ತು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ಸಂಚಾಲಕ ಸುರೇಶ್ ಶೆಣೈ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕರೂ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ,  ರಕ್ಷಕ ಶಿಕ್ಷಕ  ಅಧ್ಯಕ್ಷೆ  ಸುಜಾತ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ ಉಮೇಶ್ ಕರ್ಕೇರ, ಶಾಲಾ ಮುಖ್ಯ ಶಿಕ್ಷಕಿ ರತಿ, ಸಹ ಶಿಕ್ಷಕಿ ನಾಜಿರ, ನಿವೃತ್ತ ಶಿಕ್ಷಕ, ಆಡಳಿತ ಮಂಡಳಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು, ಆಡಳಿತ ಮಂಡಳಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!