ಗಂಗೊಳ್ಳಿ: ಸೊಸೈಟಿಗೆ ನುಗ್ಗಿದ ಕಳ್ಳ- ಸ್ಥಳದಲ್ಲೇ ಬಂಧನ
ಗಂಗೊಳ್ಳಿ ಜೂ.22 :ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೊಸೈಟಿಯೊಂದಕ್ಕೆ ನುಗ್ಗಿದ ಕಳ್ಳನನ್ನು ಸಿಸಿಟಿವಿ ಲೈವ್ ಮಾನಿಟರಿಂಗ್ ತಂಡದ ಸಮಯ ಪ್ರಜ್ಞೆಯಿಂದಾಗಿ ಪೊಲೀಸರು ಯಶಸ್ವಿಯಾಗಿ ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು(44) ಬಂಧಿತ ಆರೋಪಿ. ಜೂ.22ರ ನಸುಕಿನ ವೇಳೆ 1.44ರ ಸುಮಾರಿಗೆ ಮುಳ್ಳಿಕಟ್ಟೆಯಲ್ಲಿರುವ ಪಂಚ ಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಹೊಸಾಡು ಶಾಖಾ ಕಟ್ಟಡದ ಕಿಟಕಿಯ ಸರಳು ಮುರಿದು ಒಳ ನುಗ್ಗಿದ ಆರೋಪಿ, ಸೊಸೈಟಿಯಲ್ಲಿ ಸಿಬ್ಬಂದಿ ಕುಳಿತುಕೊಳ್ಳುವ ಮೇಜಿನ ಡ್ರಾವರ್ ಇನ್ನಿತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾನೆ.
ಆರೋಪಿ ಕಚೇರಿ ಒಳಗೆ ಪ್ರವೇಶಿಸಿದ ಕೂಡಲೇ ಎಚ್ಚೆತ್ತುಕೊಂಡ ಸೈನ್ ಇನ್ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿ, ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಠಾಣೆಯ ಕ್ರೈಂ ಎಸ್ಸೈ ಬಸವರಾಜ್ ಹಾಗೂ ಸಿಬ್ಬಂದಿ 10 ನಿಮಿಷದೊಳಗೆ ಸ್ಥಳಕ್ಕಾಗಮಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಪ್ರಕರಣದ ತನಿಖೆ ವೇಳೆ ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತ ಆರೋಪಿ ಪ್ರಕಾಶ್ ಬಾಬು ಕೇರಳ ರಾಜ್ಯದಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.