ನೀಟ್ ಪರೀಕ್ಷೆಯಲ್ಲಿ ಹಗರಣವಾಗಿಲ್ಲ ಎನ್ನುವ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ- ತಾಹೀರ್ ಹುಸೇನ್

ಉಡುಪಿ ಜೂ.22(ಉಡುಪಿ ಟೈಮ್ಸ್ ವರದಿ): ನೀಟ್ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವಾಗ ಹಗರಣವಾಗಿಲ್ಲ ಎಂದು ನಾಚಿಕೆ ಇಲ್ಲದೆ ಹೇಳುತ್ತಿರುವ  ಶಿಕ್ಷಣ ಸಚಿವರು ಮೊದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ತಾಹೀರ್ ಹುಸೇನ್ ಅವರು ಆಗ್ರಹಿಸಿದ್ದಾರೆ.

ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಚುನಾವಣೆಯ ಸಂದರ್ಭದಲ್ಲಿ ಫಲಿತಾಂಶ ಬಿಟ್ಟು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ವರದಿಗಳ ಪ್ರಕಾರ ಮೂವತ್ತು ಲಕ್ಷಕ್ಕೆ ಪ್ರಶ್ನಾ ಪತ್ರಿಕೆ ಮಾರಟವಾಗಿದೆ. ಸರಕಾರಕ್ಕೆ ಒಂದು ಚೂರು , ಮಾನ ಮಾರ್ಯದೆ ಇಲ್ಲ. ಪಿಯುಸಿ ಫಲಿತಾಂಶದಲ್ಲಿ ಉತ್ತೀರಣರಾಗದವರು ನೀಟ್ ರ್ಯಾಂಕ್ ಪಡೆಯುವುದು ಜನರ, ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀಟ್ ಪ್ರಶ್ನಾ ಪತ್ರಿಕಾ ಅವ್ಯವಹಾರ ನಡೆಸಿ ಚುನಾವಣೆ ಫಲಿತಾಂಶ ಸಂದರ್ಭದಲ್ಲಿ ರಿಸಲ್ಟ್ ಬಿಡುಗಡೆ ಮಾಡಿ, ಈ ಅವ್ಯವಹಾರ ಚರ್ಚೆಯಾಗದಂತೆ ನೋಡಿಕೊಳ್ಳಲಾಗಿದೆ. 5-6 ಜನ ರ್ಯಾಂಕ್ ಬರುವಲ್ಲಿ 60-65 ಜನ ರ್ಯಾಂಕ್ ಬರ್ತಾ ಇರುವುದು ಈ ಹಗರಣಕ್ಕೆ ಸಾಕ್ಷಿ. ಈ ಅವ್ಯವಹಾರ ಪೂರ್ವ ನಿಯೋಜಿತ. ಪೇಪರ್ ಲೀಕ್ ಮಾಡಿದವರು ಬಾಯಿ ಬಿಟ್ಟು ಪೇಪರ್ ಖರೀದಿಸಿದ ಕುರಿತು ಹೇಳುತ್ತಾರೆ. ಶಿಕ್ಷಣ ಸಚಿವರು ಹಗರಣವಾಗಿಲ್ಲ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲ, ದೇಶದ ಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನ್ಯಾವಾಗಿದೆ ಆದರೆ  ಸರಕಾರಕ್ಕೆ ಕಾಳಜಿ ಇಲ್ಲ ಎಂದ ಅವರು, ಕೂಡಲೇ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ. ಅದರೊಂದಿಗೆ ನೀಟ್ ಪರೀಕ್ಷೆ ರದ್ದುಗೊಳಿಸಬೇಕು ಎಂದರು. 

ಈ ವೇಳೆ ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಸಮೀರ್ ಪಾಶ ಅವರು ಮಾತನಾಡಿ, ಕಳೆದ ಏಳು ವರ್ಷದಲ್ಲಿ ವಿವಿಧ ಪರೀಕ್ಷೆಗಳ 70 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ‌. ಪ್ರತಿ ಬಾರಿ ಪೇಪರ್ ಲೀಕ್ ಆಗುತ್ತಿದ್ದರೂ ಸರಕಾರ ತಡೆಯುವಲ್ಲಿ ವಿಫಲವಾಗಿದೆ ಎಂದರು.

ಒಂದು ವರ್ಷ ಕಷ್ಟಪಟ್ಟು ಅಧ್ಯಯನ ಮಾಡಿ ಪರೀಕ್ಷೆಗೆ ಹೋದರೆ ಅಲ್ಲಿ ಪ್ರಶ್ನಾ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೀಡು ಮಾಡಲಾಗುತ್ತದೆ. ಪೇಪರ್ ಸೋರಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟದಲ್ಲಿದೆ. ಕೋಚಿಂಗ್ ಮಾಫಿಯಾಕ್ಕಾಗಿ ಇಂತಹ ಅಕ್ರಮಗಳು ನಡೆಯುತ್ತಿದೆ. ಹಗರಣದ ಮೂಲಕ ವೈದ್ಯರಾಗುವವರನ್ನು ಹೇಗೆ ನಂಬಲು ಸಾಧ್ಯ. ಇಂತಹ ಹಗರಣದ ಮೂಲಕ ವೈದ್ಯರಾಗುವವರು ಜನರ ಜೀವನದೊಂದಿಗೆ ಚೆಲ್ಲಾಟವಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಸ್‌ಐಒ ರಾಜ್ಯ ಕಾರ್ಯದರ್ಶಿ ಅಫ್ವಾನ್ ಬಿ ಹೂಡೆ ಅವರು ಮಾತನಾಡಿ, ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ಇಂದು ನ್ಯಾಷನಲ್ ಟಾರ್ಚರ್ ಎಜೆನ್ಸಿಯಾಗಿ ಬದಲಾಗಿದೆ. ಕೋಚಿಂಗ್ ಮಾಫಿಯಾ ಇವತ್ತು ಕೇಂದ್ರ ಸರಕಾರಕ್ಕಿಂತ ದೊಡ್ಡದಾಗಿ ಬೆಳೆದಿದೆ.  ಅಷ್ಟೊಂದು ಭದ್ರತೆಯಿದ್ದರೂ ಪೇಪರ್ ಹೇಗೆ ಸೋರಿಕೆಯಾಗುತ್ತದೆ ಎಂದು ಪ್ರಶ್ನಿಸಿದರು.

ಮೋದಿಯವರು ಪಾರದರ್ಶಕ ಪರೀಕ್ಷೆ ಕುರಿತು ಮಾತನಾಡುತ್ತಾರೆ. ಇದೀಗ ಅವರು ಈ ಹಗರಣದ ಕುರಿತು ಮಾತನಾಡಲಿ. ಅವರ ಶಿಕ್ಷಣ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಲಿ. ಈ ನೀಟ್ ನಿಂದ ರಾಜ್ಯಗಳಿಗೆ ಎಷ್ಟು ಲಾಭವಿದೆ. ಕರ್ನಾಟಕಕ್ಕೆ ಎಷ್ಟು ಲಾಭವಿದೆ‌ ಎಂಬುವುದು ಚರ್ಚೆ ಮಾಡಬೇಕು. ಈ ನೀಟ್ ಪರೀಕ್ಷೆಯನ್ನು ರದ್ದು ಮಾಡಿ ರಾಜ್ಯಗಳು ಫೆಡರಲ್ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಎಸ್.ಐ‌.ಓ ಉಡುಪಿ ಜಿಲ್ಲಾಧ್ಯಕ್ಷರಾದ ಆಯಾನ್ ಮಲ್ಪೆ, ಕ್ಯಾಂಪಸ್ ಕಾರ್ಯದರ್ಶಿ ಔಸಾಫ್ ಹೂಡೆ, ಮುಝೈನ್ ಆದಿ ಉಡುಪಿ, ನಿಫಾಲ್ ಕಿದಿಯೂರು, ನಿಹಾಲ್ ಕಿದಿಯೂರು, ಎಪಿಸಿಆರ್ ಹುಸೇನ್ ಕೋಡಿಬೆಂಗ್ರೆ, ರಿಝ್ವಾನ್, ಸಫಾನ್ ಮಲ್ಪೆ,  ಸಮೀರ್ ತೀರ್ಥಹಳ್ಳಿ  ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!