ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯಗಳ ಒದಗಿಸಿ-ಸಂತೋಷ್ ಬಜಾಲ್

ಉಡುಪಿ ಜೂ.18(ಉಡುಪಿ ಟೈಮ್ಸ್ ವರದಿ): ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯಗಳ ಒದಗಿಸುವಂತೆ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ಬಗ್ಗೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿಯ ಗೌರವ ಸಲಹೆಗಾರ ಸಂತೋಷ್ ಬಜಾಲ್ ಅವರು, ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳು ಕಳೆದ ಹಲವು ವರುಷಗಳಿಂದ ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಗಳು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೆ ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಕ್ಕೆ ಸೇರಿರುವ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯ. ಅಲೆಮಾರಿ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತದ ಮುಂದಿರಿಸಿದ ಅವರ ಬೇಡಿಕೆಗಳನ್ನು ಈಡೇರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದಡಿ ಘೋಷಿಸಿರುವ ಸವಲತ್ತುಗಳು ಈ ಸಮುದಾಯಗಳನ್ನು ತಲುಪುತ್ತಿಲ್ಲ. ಅಲೆಮಾರಿ ಸಮುದಾಯಗಳು ತಮ್ಮ ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿಲ್ಲದೆ ಸರಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ತಲತಲಾಂತರಗಳಿಂದ  ಅಲೆಮಾರಿಯಾಗಿ ಬದುಕುತ್ತಿದ್ದ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಇವತ್ತು ತಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶಕ್ಕೆ ಒಂದೇ ಕಡೆ ನೆಲೆಯೂರಲು ಪ್ರಯತ್ನಿಸಿದರೂ ಅಂತಹ ಪ್ರಯತ್ನಕ್ಕೆ ಸರಕಾರಗಳು ಸ್ಪಂದಿಸದೆ ಅಲೆಮಾರಿ ಸಮುದಾಯಗಳ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

ಇನ್ನು ಸ್ಥಳೀಯರಿಂದ ಅನ್ಯರೆಂಬ ಅನುಮಾನಕ್ಕೂ ಅವಮಾನಕ್ಕೂ ಒಳಗಾಗಿ ದಿನನಿತ್ಯ ಕಿರುಕುಳ ದೌರ್ಜನ್ಯಗಳಿಗೆ ಒಳಗಾಗುವ ಹೀನಾಯ ಪರಿಸ್ಥಿತಿ ಇವರದ್ದಾಗಿದೆ. ಇತ್ತೀಚೆಗೆ ಗುಲ್ವಾಡಿ ಹೊಳೆ ಬದಿಯಲ್ಲಿ ಅಲೆಮಾರಿಗಳು ಬದುಕುವ ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ತಪ್ಪಿತಸ್ತರ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಸಹಿತ ಹಲವು ಪ್ರಕರಣದಡಿ ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಲಾಗಿಲ್ಲ. ಇಷ್ಟೆಲ್ಲಾ ಘಟನೆಗಳಾದರೂ ಈ ಭಾಗದ ಒಬ್ಬನೇ ಒಬ್ಬ ಶಾಸಕರಾಗಲಿ, ಸಂಸದರಾಗಲಿ ಅಲೆಮಾರಿ ಗುಡಿಸಲಿಗೆ ಭೇಟಿ ನೀಡಿಲ್ಲ. ಕನಿಷ್ಟ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡದೆ ಅಲೆಮಾರಿ ಸಮುದಾಯದ ವಿರೋಧಿಯಾಗಿ ವರ್ತಿಸಿದ್ದಾರೆ. ಆಳುವ ಸರಕಾರ ಕೂಡ ಈ ಸಮುದಾಯಕ್ಕೆ ಆಸರೆಯಾಗಿ ನಿಂತಿಲ್ಲ. ಈ ರೀತಿ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿರುವ ಬಡಜನ ವಿರೋಧಿ ಸರಕಾರಗಳ ವಿರುದ್ಧ ಮತ್ತು ಸಮುದಾಯದ ಮೇಲಾಗುವ ಕಿರುಕುಳ ದೌರ್ಜನ್ಯಗಳ ವಿರುದ್ಧ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಧ್ವನಿ ಎತ್ತಲಿದೆ ಮತ್ತು ಅಲೆಮಾರಿ ವಿರೋಧಿ ಸರಕಾರದ ವಿರುದ್ದ ಸಂಘಟಿತ ಹೋರಾಟ ನಡೆಸಲು ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ ಕರವಾಳಿ ಭಾಗದಲ್ಲಿ ವಾರದಿಂದ ಸುರಿದ ನಿರಂತರ ಮಳೆಯಿಂದ ನದಿ ಪಾತ್ರಗಳೆಲ್ಲಾ ತುಂಬಿ ಹರಿಯುತ್ತಿದ್ದೆ. ಪ್ರವಾಹ ಸೃಷ್ಟಿಯಾಗುವ ಎಲ್ಲಾ ಮುನ್ಸೂಚನ ಉಂಟಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಡಳಿತ ಮಳೆಗಾಲದ ಅವಘಡಗಳಿಂದ ಡೆಂಗ್ಯು, ಮಲೇರಿಯಾ ಎಂಬ ಸಾಂಕ್ರಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡುವ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ ಅದೇ ನದಿ ತೀರದಲ್ಲಿ ಗುಡಿಸಲಿನಲ್ಲಿ ಬದುಕುವ ಈ ಅಲೆಮಾರಿ ಸಮುದಾಯ ವಿಪರೀತವಾಗಿ ಸುರಿಯುವ ಮಳೆ, ಸಿಡಿಲು, ಮಿಂಚಿನಿಂದ ರಕ್ಷಿಸಲು ಜಿಲ್ಲಾ ಉಸ್ತವಾರಿ ಮಂತ್ರಿ ಮತ್ತು ಜಿಲ್ಲಾಡಳಿತ ಯಾವ ರಕ್ಷಣಾ ಕ್ರಮಕೈಗೊಂಡಿದೆ ಎಂದು ಉತ್ತರಿಸಬೇಕು. ಇಷ್ಟೊಂದು ವರುಷಗಳಿಂದ ನದಿ ತಟದಲ್ಲಿ ಬದುಕುವ ಅಲೆಮಾರಿ ಸಮುದಾಯಗಳ ಬಗೆಗೆ ಇಷ್ಟೊಂದು ನಿರ್ಲಕ್ಷ್ಯ ಯಾಕಾಗಿ ಎಂದು ಪ್ರಶ್ನಿಸಿದರು.

ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳಂತಹ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಅವರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಸಲುವಾಗಿಯೇ ಕರ್ನಾಟಕ ರಾಜ್ಯ ಸರಕಾರದಡಿಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮವೂ ರಚನೆಯಾಗಿವೆ. ಕರ್ನಾಟಕ ರಾಜ್ಯಾದ್ಯಂತ ಗುಡಿಸಲು ಮುಕ್ತಗೊಳಿಸುವ ಹೇಳಿಕೆಗಳು ಜಾಹೀರಾತುಗಳು ಭರವಸೆಗಳಿಗಷ್ಟೇ ಸೀಮಿತವೇ ಎಂದು ಸರಕಾರಗಳು ಉತ್ತರಿಸಲಿ. ಸರಕಾರದ ವಿವಿಧ ವಸತಿ ಯೋಜನೆಗಳು ಈ ಸಮುದಾಯಕ್ಕೆ ಆಧ್ಯತೆಯಲ್ಲಿ ಸಿಗುವಂತ ನಿಟ್ಟಿನಲ್ಲಿ ರಾಜ್ಯ ಸರಕಾರ ಗಮನ ಹರಿಸುವಂತಾಗಬೇಕು ಎಂದರು.

ಈ ಎಲ್ಲಾ ಹಿನ್ನಲೆಯಲ್ಲಿ ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳಿಗೆ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತವು ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ಗುಲ್ವಾಡಿಯಲ್ಲಿ ದೌರ್ಜನ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಸಮುದಾಯದ ಬೇಡಿಕೆಗಳನ್ನುಬೇಡಿಕೆಗಳು:

1. ಜಿಲ್ಲಾಡಳಿತವು ವಿವಿಧೆಡೆಗಳಲ್ಲಿ ಟೆಂಟ್ ಗಳಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಸರ್ವೆ ನಡೆಸುವುದು.

2. ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳ ಆರೋಗ್ಯ ಕಾರ್ಡು, ಮತ್ತು ಇತರೆ ಗುರುತಿನ ಕಾರ್ಡುಗಳನ್ನು ವಿತರಿಸುವುದು.

3. ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಒದಗಿಸುವುದು.

4. ಪ್ರಸ್ತುವ ವಾಸಿಸುತ್ತಿರುವ ಟೆಂಟ್ ಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ದಾರಿ, ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆ ಮಾಡುವುದು.

5. ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮದಂತಹ ವಿಶೇಷ ಕೋಶದ ಸೌಲಭ್ಯಗಳನ್ನು ಈ ಟೆಂಟ್ ಪ್ರದೇಶಗಳಿಗೆ ಅಳವಡಿಸುವುದು.

6. ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ  ಮೀನುಗಾರಿಕಾ ವೃತ್ತಿಯಲ್ಲಿ ನಿರತರಾಗಿರುವಾಗ ನಡೆಯುವ ದೌರ್ಜನ್ಯ ಘಟನೆಗಳನ್ನು ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದು.

7. ಶಿಳ್ಳೆಕ್ಯಾತ ಕುಟುಂಬಗಳು ಹೊಂದಿರುವ ಪಡಿತರ ಚೀಟಿಗಳಿಗೆ ಕೂಡಲೇ ಆಹಾರ ಸಾಮಾಗ್ರಿಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸತಾಯಿಸದೆ ನೀಡುವಂತೆ ನಿರ್ದೇಶನ ನೀಡುವುದು.

8. ಶಿಳ್ಳೆಕ್ಯಾತ ಸಮುದಾಯದ ಮನೆ ಮಂದಿ ಡೆಂಗ್ಯೂ ಮಲೇರಿಯದಂತಹ ರೋಗಗಳಿಂದ ತಪ್ಪಿಸಲು ಪ್ರತೀ ಟೆಂಟ್ ಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸುವುದು.

9. ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರತೀ ಕುಟುಂಬಗಳಿಗೂ 500 gsm ಟರ್ಪಾಲ್ ಗಳನ್ನು ಒದಗಿಸಿಕೊಡುವುದು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ವೃತ್ತಿನಿರತ ಅಲೆಮಾರಿ ( ಶಿಳ್ಳೆಕ್ಯಾತ ) ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಕವಿರಾಜ್ ಎಸ್ ಕಾಂಚನ್, ಅಧ್ಯಕ್ಷ  ಶಂಕರ , ಕಾರ್ಯದರ್ಶಿ ರಾಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!