ಉಡುಪಿ: ಸಹೊದ್ಯೋಗಿಗಳಿಗೆ ಬಿರಿಯಾನಿ ಹಂಚಿ ಬಕ್ರಿದ್ ಆಚರಿಸಿಕೊಂಡ ಬಸ್ ಚಾಲಕ, ನಿರ್ವಾಹಕರು
ಉಡುಪಿ ಜೂ.18(ಉಡುಪಿ ಟೈಮ್ಸ್ ವರದಿ) :ಸೌಹಾರ್ದತೆಯನ್ನು ಸಾರುವ ಮೂಲಕ ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಪ್ರೀತಿ, ತ್ಯಾಗ, ಬಲಿದಾನದ ಸಂಕೇತವಾದ ಬಕ್ರಿಧ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಉಚ್ಚಿಲದ ಖಾಸಗಿ ಬಸ್ ನ ಮುಸ್ಲಿಂ ಚಾಲಕ, ನಿರ್ವಾಹಕರುಗಳು ತಮ್ಮ ಸಹೋದ್ಯೋಗಿ ಬಸ್ ಚಾಲಕ, ನಿರ್ವಾಹಕರುಗಳಿಗೆ ಬಿರಿಯಾನಿ ಹಂಚಿ ಹಬ್ಬದ ಶುಭ ಸಂದೇಶವನ್ನು ಸಾರುವ ಮೂಲಕ ಬಕ್ರಿದ್ ಆಚರಿಸಿಕೊಂಡಿದ್ದಾರೆ.
ಉಡುಪಿ – ಮಂಗಳೂರು ನಡುವೆ ಸಂಚಾರ ನಡೆಸುವ ಖಾಸಗಿ, ಎಕ್ಸ್ ಪ್ರೆಸ್, ಸರ್ವಿಸ್ ಮತ್ತು ಇತರ ಬಸ್ಸುಗಳ ಸುಮಾರು 450 ಮಂದಿಗೆ ಬಕ್ರಿದ್ ಸಂಭ್ರಮದ ಅಂಗವಾಗಿ ಈ ತಂಡ ಬಿರಿಯಾನಿಯನ್ನು ವಿತರಿಸಿದೆ.
ಇದೇ ಮಾರ್ಗದಲ್ಲಿ ಸಂಚಾರ ನಡೆಸುವ ಖಾಸಗಿ ಬಸ್ ನ ಸಿಬ್ಬಂದಿಗಳಾದ ಜಾವೇದ್, ಶನವಾಜ್, ನಾಸಿರ್, ನಿಜಾಮ್, ಮೌಜಿ, ಮುನ್ನ ರವರ ತಂಡದ ಈ ಕಾರ್ಯಕ್ಕೆ ವಿವಿಧ ಬಸ್ಸಿನ ಮಾಲಕರು ಮತ್ತು ಇತರ ಸಿಬ್ಬಂದಿಗಳು ಕೂಡಾ ಸಾಥ್ ನೀಡಿದ್ದರು.
ಈ ಬಗ್ಗೆ ಮಾತನಾಡಿದ ತಂಡದ ಸದಸ್ಯ ಜಾವೇದ್ ಅವರು, ನಾವೆಲ್ಲಾ ಒಂದೆ ವೃತ್ತಿಯನ್ನು ಮಾಡಿಕೊಂಡಿದ್ದು, ಬಕ್ರೀದ್ ಹಬ್ಬದ ಸಂಭ್ರಮವನ್ನು ಇನ್ನಷ್ಟು ಸಂತುಷ್ಟಗೊಳಿಸಲು ನಾವು ಬಿರಿಯಾನಿ ನೀಡಿದ್ದೇವೆ” ಎಂದು ಹೇಳಿದರು.
ಸದಾ ವಿವಿಧ ಕೋಮು ಸೂಕ್ಷ್ಮ ವಿಷಯಗಳಿಗೆ ಸುದ್ದಿಯಲ್ಲಿರುತ್ತಿದ್ದ ಕರಾವಳಿಯಲ್ಲಿ ಇಂತಹ ಯುವಕರ ಸೌಹಾರ್ದದ ನಡೆಗಳು, ಸೌಹಾರ್ಯದತೆಯ ಹೊಸ ಹುರುಪನ್ನು ಮೂಡಿಸಿವೆ.