ಮಂಗಳೂರು: 800 ರೂ.ಗೆ ವ್ಯಕ್ತಿ ಕೊಲೆ: ಆರೋಪಿ ಅರೆಸ್ಟ್
ಮಂಗಳೂರು ಜೂ.18 : ಸುಳ್ಯದ ಅಜ್ಜಾವರ ಗ್ರಾಮದ ಕಾಂತಮಂಗಲ ಎಂಬಲ್ಲಿ 800 ರೂ.ಗೆ ಒಬ್ಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ವಿರಾಜಪೇಟೆಯ ವಸಂತ (45) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿ ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್ ನಾಯ್ಕ ( 35 ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸುಳ್ಯದ ಅಜ್ಜಾವರ ಗ್ರಾಮದ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಯು 800 ರೂ. ಗೆ ವಸಂತ ಅವರ ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಗೈದಿರುವುದು ಬೆಳಕಿಗೆ ಬಂದಿದೆ.
ಉದಯ ಕುಮಾರ್ ಗೆ ಬಾರೊಂದರಲ್ಲಿ ವಸಂತ ಅವರು ಪರಿಚಯವಾಗಿತ್ತು. ರವಿವಾರ ರಾತ್ರಿ ಇಬ್ಬರು ಕಾಂತಮಂಗಲಕ್ಕೆ ಅಟೋ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ಮಲಗಿದ್ದರು. ವಸಂತ ಎಂಬವರ ಬಳಿ 800 ರೂ. ಹಣ ಇರುವುದನ್ನು ಗಮನಿಸಿದ ಉದಯ ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಬೆಳಿಗ್ಗೆ ಹಣ ಹಾಗೂ ಮೊಬೈಲ್ ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.