ಉಡುಪಿ: ಇಂಧನ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
ಉಡುಪಿ ಜೂ.17(ಉಡುಪಿ ಟೈಮ್ಸ್ ವರದಿ): ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಇಂದು ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಕಚೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಮಾತನಾಡಿ, 2023 ರ ಚುನಾವಣೆಗೆ ಬಿಟ್ಟಿ ಆಮಿಷ ನೀಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಸರಕಾರ ಬಂದ ಬಳಿಕ ನೀಡಿದ ಭರವಸೆಗಳನ್ನು ನೀಡದೆ ಜನರನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು.
ಪ್ರತೀ ಬಾರಿಯೂ ಕೇಂದ್ರ ಸರಕಾರವನ್ನು ಟೀಕಿಸುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಇದು ಪಕ್ಷದ ಪ್ರತಿಭಟನೆಯಲ್ಲ ಸಾಮಾನ್ಯ ಜನರ ಸಮಸ್ಯೆ. ಜನರ ಪರ ಪ್ರತಿಭಟನೆಗೂ ಸರಕಾರ ಅನುಮತಿ ನೀಡಿಲ್ಲ. ಸಾಮಾನ್ಯ ಜನರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದಂತಾಗಿದೆ. ಹಾಲಿನ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ. ಮುಂದಿನ ದಿನದಲ್ಲಿ ಜನರು ಭಿಕ್ಷೆ ಬೇಡುವ ಸ್ಥಿತಿಯೂ ದೂರವಿಲ್ಲ. ಚೊಂಬು ಕೊಟ್ಟವರು ಕಾಂಗ್ರೆಸ್ ಸರಕಾರ. ಚೊಂಬು ನೀಡಿ ಜನರು ಭಿಕ್ಷೆ ಬೇಡುವಂತೆ ಮಾಡಲಾಗಿದೆ. ಮುಂದೆ ಇಂಧನ ದರ ಇಳಿಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ, ಇಂಧನ ಹೆಚ್ಚಳವಾದರೆ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಜನಪ್ರತಿನಿಧಿಗಳಿಗೆ ಸರಕಾರದ ಯಾವುದೇ ಫಂಡ್ ಬಾರದೆ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದೆ. ಜನರಿಗೆ ಅನ್ಯಾಯ ಮಾಡುತ್ತಾ ಸರಕಾರ ಕಾಲಹರಣ ಮಾಡುತ್ತಿದೆ. ಸರಕಾರ ನಡೆಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಯಿದೆ. ಮುಂದಿನ ದಿನಗಳಲ್ಲಿಯೂ ಈ ಬಗ್ಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಟ್ಲುಪ್ಪಾಡಿ ಮಾತನಾಡಿ ರಾಜ್ಯ ಸರಕಾರಿ ಗ್ಯಾರಂಟಿ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದೆ. ಸರಕಾರ ಆಡಳಿತ ಹಿಡಿದ 1 ವರ್ಷದ ಬಳಿಕ ಹಲವಾರು ಮಂದಿ ರೈತರ ಆತ್ಮಹತ್ಯೆ ಆಗಿದೆ ಎಂದರು.