ಉಡುಪಿ: ಯುವಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು- ಜಿಲ್ಲಾ ಸರ್ಜನ್
ಉಡುಪಿ, ಜೂ.15 : ಉಡುಪಿಯು ರಕ್ತದಾನಿಗಳ ಜಿಲ್ಲೆಯಾಗಿದ್ದು, ರಕ್ತವನ್ನು ಭೇದ ಭಾವವಿಲ್ಲದೆ ಅಗತ್ಯವಿರುವವರಿಗೆ ನೀಡುವುದು ನಮ್ಮ ಉದ್ದೇಶವಾಗಿದೆ. ರಕ್ತದ ನಿರಂತರ ಸೇವೆಯು ಜನರಿಗೆ ಅವಶ್ಯವಿರುವುದರಿಂದ ಯುವಜನರು ಸ್ವಯಂ ಪ್ರೇರಣೆಯಿಂದ ರಕ್ತದಾನದಲ್ಲಿ ಪಾಲ್ಗೊಂಡು ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಅಶೋಕ್ ಹೆಚ್. ಹೇಳಿದರು.
ಇಂದು ನಗರದ ಅಜ್ಜರಕಾಡು ರೆಡ್‍ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‍ನಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆಸ್ಪತ್ರೆಗಳ ರೋಗಿಗಳಿಗೆ ರಕ್ತದ ಅವಶ್ಯಕತೆಯು ಇರುವುದರಿಂದ ರಕ್ತದಾನ ಮಾಡುವ ಮೂಲಕ ಅಥವಾ ರಕ್ತದಾನಿಗಳ ಮೂಲಕ ರಕ್ತವನ್ನು ಪಡೆದು ಅವರಿಗೆ ನೀಡಿ ಜೀವ ಉಳಿಸಬಹುದು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಕೃತಕ ಅವಯವ ಜೋಡಣಾ ಘಟಕದ ಜೊತೆಗೆ ಮಾಡುತ್ತಿರುವ ಮಾನವೀಯ ಕಾರ್ಯ, ಸಾಮಾಜಿಕ ಸೇವೆಯ ಬಗ್ಗೆ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ್ ಆಸ್ಪತ್ರೆಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಅವರು ಮಾತನಾಡಿ, ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಟವಾಗಿದೆ. ಯುವ ಜನತೆ ಜೀವನದಲ್ಲಿ ವಿದ್ಯಾಭ್ಯಾಸದೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ರಕ್ತ ದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಕ್ತ ದಾನದಿಂದಾಗಿ ನಮ್ಮ ಅರೋಗ್ಯವನ್ನು ವೃದ್ಧಿಸುವುದರೊಂದಿಗೆ ಮತ್ತೊಬ್ಬರ ಜೀವವನ್ನು ರಕ್ಷಿಸಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ರಕ್ತ ದಾನವನ್ನು ಮಾಡಲು ಮುಂದಾಗಬೇಕು ಎಂದರು.
ರೆಡ್‍ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ರಕ್ತ ದಾನಿಗಳಾದ ಬನ್ನಾಡಿ ರಾಘವೇಂದ್ರ ಶೆಟ್ಟಿ, ಸುದರ್ಶನ್ ಕೆ. ಕುಂದಾಪುರ, ಕೆ. ದೀಪಕ್ ಕಾಮತ್, ಹರೀಶ್ ಅಮೀನ್ ಹಾಗೂ ಚೇತನ್ ಕುಮಾರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ., ರಾಘವೇಂದ್ರ ಪ್ರಭು ಕರ್ವಾಲ್, ರೆಡ್‍ಕ್ರಾಸ್ ಖಜಾಂಜಿ ರಮಾದೇವಿ, ರೆಡ್‍ಕ್ರಾಸ್ ಆಡಳಿತ ಮಂಡಳಿ ಸದಸ್ಯ ಟಿ. ಚಂದ್ರಶೇಖರ್, ಕಾಲೇಜಿನ ವಿದ್ಯಾರ್ಥಿಗಳು, ರೆಡ್‍ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.