ಶಿರ್ವ: ಕಾರು -ಆಟೋ ರಿಕ್ಷಾ ಡಿಕ್ಕಿ- ಪ್ರಯಾಣಿಕ ಮಹಿಳೆ ಮೃತ್ಯು

ಶಿರ್ವಾ ಜೂ.13(ಉಡುಪಿ ಟೈಮ್ಸ್ ವರದಿ): ಕಾರು ಡಿಕ್ಕಿ ಹೊಡೆದು ರಿಕ್ಷಾದಲ್ಲಿ ಇದ್ದ ಪ್ರಯಾಣಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಆಗ್ನೇಸ್‌ ನೊರೊನ್ಹಾ (76) ಎಂದು ಗುರುತಿಸಲಾಗಿದೆ. ಇವರು ಸುರೇಶ್‌ ಎಂಬವರ ಅಟೋ ರಿಕ್ಷಾದಲ್ಲಿ ತಮ್ಮ ಅಕ್ಕನ ಮಗಳಾದ ಜೆಸಿಂತಾ ಮೆನೇಜಸ್‌ ಅವರೊಂದಿಗೆ ಪಡುಬೆಳ್ಳೆಯಿಂದ ಸುಬಾಸ್‌ ನಗರಕ್ಕೆ ಹೋಗುತ್ತಿರುವಾಗ ಎದುರಿನಿಂದ ಪಡುಬೆಳ್ಳೆ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ಮನೋಜ್ ಎಂಬಾತ ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ಅಟೋ ರಿಕ್ಷಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರೂ ಹಾಗೂ ಚಾಲಕ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ರಿಕ್ಷಾದಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಆಗ್ನೇಸ್‌ ನೊರೊನ್ಹಾ ರವರು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!