ಜೂ.15-ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯಿಂದ ‘ಇನ್ಸ್ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಗೆ ಚಾಲನೆ

ಉಡುಪಿ ಜೂ.13(ಉಡುಪಿ ಟೈಮ್ಸ್ ವರದಿ):ನಗರದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಶನ್) ಆಸ್ಪತ್ರೆಯಿಂದ ಹವಾಮಾನ ಬದಲಾವಣೆ ನೀಗಿಸಲು 5 ವರ್ಷಗಳ ‘ಇನ್ಸ್ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಗೆ ಜೂ.15 ರಿಂದ ಚಾಲನೆ ನೀಡಲಾಗುವುದು.

ಈ ಬಗ್ಗೆ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನ ಅವರು ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

‘ಇನ್ಸ್ಪಾರ್ಯ’ ಯೋಜನೆಗೆ ಜೂ.15 ರಂದು ಬೆಳಿಗ್ಗೆ 11 ಕ್ಕೆ ಆಸ್ಪತ್ರೆ ಆವರಣದಲ್ಲಿ ನಡೆಯಲಿರುವ ಸಂಸ್ಥೆಯ 101 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು. ಇಡೀ ಆಸ್ಪತ್ರೆ ಆವರಣಕ್ಕೆ ನವೀಕರಿಸಬಹುದಾದ ಇಂಧನ ಒದಗಿಸುವ ಸೌರ ಫಲಕಗಳ ಅಳವಡಿಕೆಯನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಶಪ್ ಅತಿ ವಂದನೀಯ ಹೇಮಚಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ್ ಭಾಗವಹಿಸುವರು. ನಾಗಾಲ್ಯಾಂಡ್‌ ಸಂಗೀತಗಾರ ಶ್ರೀನೀಸೆ ಮೆರುನೊ ಮತ್ತು ಸಿಎಸ್‌ಐ ಏರಿಯಾ ಚೇರ್ಮನ್ ವಂ.ಐವನ್ ಡಿ.ಸೋನ್ಸ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

“ಹವಾಮಾನ ಬದಲಾವಣೆಯು ಇಂದಿನ ಅತಿದೊಡ್ಡ ಅಸ್ತಿತ್ವದ ಸವಾಲಾಗಿದೆ. “ಆರೋಗ್ಯ ಪೂರೈಕೆದಾರರಾಗಿ ನಾವು ತೀವ್ರ ಶಾಖದ ಒತ್ತಡ, ರೋಗ ವಾಹಕ ಮೂಲಕ ಹರಡುವ ರೋಗಗಳ ಉದ್ಭವ, ಅತಿರೇಖ ಹವಾಮಾನದ ಪ್ರಭಾವದಿಂದಾಗುವ ಹಾನಿ ಸೇರಿದಂತೆ ಹವಾಮಾನ ಬದಲಾವಣೆಯಿಂದಾಗುವ ಆರೋಗ್ಯದ ಪರಿಣಾಮಗಳನ್ನು ನಾವು ಪ್ರತ್ಯಕ್ಷವಾಗಿ ವೀಕ್ಷಿಸುತ್ತೇವೆ. ನಮ್ಮ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಈ ಪರಿಸರದ ಸವಾಲುಗಳನ್ನು ತಗ್ಗಿಸುವಲ್ಲಿ ಮುನ್ನಡೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ,” ಎಂದು ಹೇಳಿದರು.

ಹವಾಮಾನ ಬದಲಾವಣೆಯು ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ದೀರ್ಘಾವಧಿಯ ಹವಾಮಾನ ಮಾದರಿಗಳಲ್ಲಿ ಗಮನಾರ್ಹ ಮತ್ತು ಆಸಹಜ ಬದಲಾವಣೆಗಳನ್ನು ಒಳಗೊಳ್ಳುತ್ತದೆ. ಈ ವಿದ್ಯಮಾನವು ವಾತಾವರಣದಲ್ಲಿ ಗ್ರೀನ್ ಹೌಸ್ ಅನಿಲಗಳ (GHG) ಶೇಖರಣೆಯಿಂದ ಉಂಟಾಗುತ್ತದೆ. ಇದು ವಾತಾವರಣದಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಕ್ರಮೇಣ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತದೆ. ಇದು ಭೂಮಿಯ ಮೇಲಿನ ಮಂಜುಗಡ್ಡೆಗಳ ಕರಗುವಿಕೆ, ಏರುತ್ತಿರುವ ಸಮುದ್ರ ಮಟ್ಟಗಳು, ಬದಲಾದ ಮಳೆಯ ನಮೂನೆಗಳು ಮತ್ತು ಹವಾಮಾನ ವೈಪರೀತ್ಯದ ಘಟನೆಗಳಂತಹ ಪರಿಣಾಮಗಳನ್ನು ಬೀರುತ್ತದೆ ಎಂದರು.

ಆರೋಗ್ಯ ಕ್ಷೇತ್ರವು ಇಂಧನ ಮತ್ತು ನೀರಿನ ಬಳಕೆ, ಸಾರಿಗೆ, ಕಟ್ಟಡ ಕಾಮಗಾರಿಗಳು, ಉತ್ಪಾದನೆ, ಪೂರೈಕೆ ಸರಪಳಿ ನಿರ್ವಹಣೆ ಮತ್ತು ತ್ಯಾಜ್ಯ ವಿಲೇವಾರಿ ಮುಂತಾದ ವಿವಿಧ ಚಟುವಟಿಕೆಗಳ ಮೂಲಕ ಗಮನಾರ್ಹ ಪ್ರಮಾಣದ ಗ್ರೀನ್ ಹೌಸ್ ಅನಿಲಗಳನ್ನು ಹೊರಸೂಸುತ್ತದೆ. ಲೊಂಬಾರ್ಡ್ ಆಸ್ಪತ್ರೆಯು ಹವಾಮಾನ ಬದಲಾವಣೆಯನ್ನು ಪರಿಹರಿಸಲು ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಕೊಡುಗೆ ನೀಡಲು ಆರೋಗ್ಯ ಉದ್ಯಮದ ಜವಾಬ್ದಾರಿಯನ್ನು ಅಂಗೀಕರಿಸುತ್ತದೆ. “ಕೆಲವು ಆಸ್ಪತ್ರೆಗಳು ಸೌರಶಕ್ತಿಗೆ ಪರಿವರ್ತನೆಗೊಳ್ಳಲು ಪ್ರಾರಂಭಿಸಿದ್ದು, ಲೊಂಬಾರ್ಡ್ ಆಸ್ಪತ್ರೆಯು ವ್ಯವಸ್ಥಿತ ಮತ್ತು ಸಮಗ್ರ ರೀತಿಯಲ್ಲಿ ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಬಹು ಅಂಶಗಳನ್ನು ಪರಿಹರಿಸಲು ‘ಇನ್ಸ್ಪಾಯರ್’ ಎಂಬ ಹೆಸರಿನ ಸಮಗ್ರ ಕಾರ್ಯತಂತ್ರವನ್ನು ರೂಪಿಸುವ ಮೂಲಕ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದೆ ಎಂದರು.

ಈಗಾಗಲೇ ಇಂಗಾಲದ ಹೊರಸೂಸುವಿಕೆಯ ಮಾಪನವನ್ನು ಪೂರ್ಣಗೊಳಿಸಿದ್ದೇವೆ. ಇಂಧನ ಮತ್ತು ನೀರಿನ ಬಳಕೆ ಅಡಿಟ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಯೋಜನೆ ಉದಾರ ಅನುದಾನದೊಂದಿಗೆ ನಮಗೆ ಸಹಾಯ ಮಾಡಿದ್ದಕ್ಕಾಗಿ ಸ್ವಿಟ್ಟಲೆರ್ಂಡ್‌ನ ಲೊಂಬಾರ್ಡ್ ಫೌಂಡೇಶನ್‌ಗೆ ಕೃತಜ್ಞರಾಗಿದ್ದೇವೆ,’ ಎಂದು ಹೇಳಿದರು.

ಇನ್ಸ್ಪಾಯರ್’ (INSPIRE) ಯೋಜನೆ

‘ಇನ್ಸ್ಪಾಯರ್‌’ ಯೋಜನೆಯು ಆಸ್ಪತ್ರೆಯ ಪರಿಸರದ ಹೆಜ್ಜೆಗುರುತನ್ನು ಮುಟ್ಟಲು ಸಮಗ್ರ ಕಾರ್ಯ ತಂತ್ರವನ್ನು ಸೂಚಿಸುತ್ತದೆ.

I.ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಮತ್ತು ಗ್ರೀನ್ ಹೌಸ್ ಅನಿಲಗಳನ್ನು ಕಡಿಮೆ ಮಾಡಲು ಸಮಗ್ರ ವಿಧಾನವನ್ನು ಪ್ರಾರಂಭಿಸುವುದು.

N: ಜೀವವೈವಿಧ್ಯ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಕ್ಯಾಂಪಸ್ ಹಸಿರೀಕರಣ ಯೋಜನೆ.

S: ನವೀಕರಿಸಬಹುದಾದ ಶಕ್ತಿ ಒದಗಿಸಲು ಸೌರ ವಿದ್ಯುತ್ ಬಳಕೆ.

P: ಸಮಗ್ರ ಜೈವಿಕ ತ್ಯಾಜ್ಯ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವುದು.

I: ಆರೋಗ್ಯಕರ ಪರಿಸರಕ್ಕಾಗಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮಗಳನ್ನು ಅನುಷ್ಠಾನ ಗೊಳಿಸುವುದು. 

R: ಅಂತರ್ಜಲ ಮರುಪೂರಣವನ್ನು ಪುನಶ್ಚೇತನಗೊಳಿಸುವುದು ಮತ್ತು ನೀರಿನ ಕೊರತೆ ನಿರ್ವಹಣೆಗೆ ಪರಿಹಾರಗಳು.

E: ಜೀವನಶೈಲಿ ಮತ್ತು ನಡವಳಿಕೆಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲು ಜನರನ್ನು ಸಕ್ರಿಯಗೊಳಿಸುವ ಮೂಲಕ ಒಟ್ಟಾರೆ ಸಮುದಾಯ ಆರೋಗ್ಯವನ್ನು ಬಲಪಡಿಸುವುದು.

ಪ್ರಮುಖ ವಿಷಯಗಳು ಮತ್ತು ಗುರಿಗಳು

ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯ ಮೂಲಕ ಶಕ್ತಿಯ ದಕ್ಷತೆ, ನೀರಿನ ಕೊರತೆ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಾಯು ಮಾಲಿನ್ಯವನ್ನು ನಿಭಾಯಿಸುವುದು, ಕ್ಯಾಂಪಸ್‌ನಲ್ಲಿ ಜೀವ ವೈವಿಧ್ಯವನ್ನು ಉತ್ತೇಜಿಸುವುದು ಮತ್ತು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆಯ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು.

“ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸಣ್ಣ ಇಂಗಾಲದ ಹೆಜ್ಜೆ ಗುರುತುಗಳನ್ನು ಪ್ರತಿಪಾದಿಸುವಲಗಲಿ ಆರೋಗ್ಯ ಕಾರ್ಯಕರ್ತರು ವಿಶಿಷ್ಟ ಸ್ಥಾನದಲ್ಲಿದ್ದಾರೆ’ “ವಿಶ್ವಾಸಾರ್ಹ ವೃತ್ತಿಪರರು ಮತ್ತು ಮೊದಲ ಪ್ರತಿಸ್ಪಂದಕರಾಗಿ ಸಮುದಾಯದೊಳಗೆ ಜೀವನಶೈಲಿ ಮತ್ತು ನಡವಳಿಕೆಗಳಲ್ಲಿ ಬದಲಾವಣೆಗಳನ್ನು ಪ್ರೇರೇಪಿಸುವುದರಲ್ಲಿಯೂ ಉತ್ತಮ ಸ್ಥಾನದಲ್ಲಿದ್ದೇವೆ. ‘ಇನ್ಸ್ಪಾಯರ್‌’ ಯೋಜನೆಯು ಎಲ್ಲರಿಗೂ ಆರೋಗ್ಯಕರ, ಸುಸ್ಥಿರ ಭವಿಷ್ಯವನ್ನು ಭದ್ರಪಡಿಸುವುದು ಬದ್ಧತೆಯಾಗಿದೆ,’

ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಬಗ್ಗೆ

ಜೂನ್ 15, 1923 ರಂದು ಯುವ ಸ್ವಿಸ್‌ ಮಿಶನರಿ ಡಾ. ಇವಾ ಲೊಂಬಾರ್ಡ್ ಸ್ಥಾಪಿಸಿದ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕೇವಲ ಆರು ಹಾಸಿಗೆಗಳಿಂದ ಆರಂಭಗೊಂಡ ಆಸ್ಪತ್ರೆಯು ಈಗ 125 ಹಾಸಿಗೆಗಳನ್ನು, ಎಲ್ಲಾ ಪ್ರಮುಖ ಸೌಲಭ್ಯಗಳನ್ನು ಹೊಂದಿದೆ. ಸ್ವಿಟ್ಜರ್ಲ್ಯಾಂಡ್‌ನ ಲೊಂಬಾರ್ಡ್ ಕುಟುಂಬವು ಬಂಡವಾಳ ನಿಧಿಯ ಮೂಲಕ ‘ಇನ್ಸ್ಪಾಯರ್’ ಯೋಜನೆಯನ್ನು ಬೆಂಬಲಿಸುತ್ತಿದೆ. ಆಸ್ಪತ್ರೆಯು ಸುಮಾರು 350 ವಿದ್ಯಾರ್ಥಿಗಳಿಗೆ ನರ್ಸಿಂಗ್ ಮತ್ತು ಆರೆವೈದ್ಯಕೀಯ ವಿಜ್ಞಾನದಲ್ಲಿ ಕೋರ್ಸ್‌ಗಳನ್ನು ನೀಡುವ ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಜೊತೆಗೆ ಶಿಶುವಿಹಾರ ಶಾಲೆಯನ್ನು ಸಹ ನಡೆಸುತ್ತಿದೆ. ಇದರ ಸಮುದಾಯ-ಆಧಾರಿತ ಉಪಕ್ರಮಗಳಲ್ಲಿ ಕರುಣಾಲಯ (ವೃದ್ಧರ ಆರೈಕಾ ಸೇವಾ ಕೇಂದ್ರ), ಸಹಜೀವನ ವೃದ್ಧಾಶ್ರಮ ಮತ್ತು ‘ವಾತ್ಸಲ್ಯ’ ಉಪಶಮನ ಕೇಂದ್ರ ಸೇರಿವೆ. ಇದು ಜಮಿಯುತ್ ಉಲ್ ಫಲಾಹ್ ಸಹಯೋಗದೊಂದಿಗೆ ಬೆಳಪು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಹ ನಡೆಸುತ್ತಿದೆ. ಪ್ರತಿ ವರುಷ ಹಲವು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಗಣೇಶ್ ಕಾಮತ್, ಡೀನಾ ಪ್ರತಿಭಾ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ರೋಹಿ ರತ್ನಾಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!