ಸಿಎಂ ರಾಜೀನಾಮೆ ಕೇಳುವ ನೈತಿಕತೆ ನಿಮಗಿಲ್ಲ- ಶಾಸಕ ಸುನೀಲ್‌ಗೆ ಕೃಷ್ಣಮೂರ್ತಿ ಆಚಾರ್ಯ ವ್ಯಂಗ್ಯ
ಉಡುಪಿ ಜೂ.11(ಉಡುಪಿ ಟೈಮ್ಸ್ ವರದಿ): ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಿನಾಮೆ ಕೇಳುವ ನೈತಿಕತೆ ನಿಮಗಿಲ್ಲ ಎಂದು ಉಡುಪಿ ಕಾಂಗ್ರೆಸ್ ಪ್ರಚಾರ ಸಮೀತಿ ಅಧ್ಯಕ್ಷ ಕೆ ಕೃಷ್ಣಮೂರ್ತಿ ಆಚಾರ್ಯ ಅವರು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಮುಖ್ಯಮಂತ್ರಿಗಳು ಕ್ರೀಡಾ ಸಚಿವರಾದ ಬಿ. ನಾಗೇಂದ್ರರವರಿಂದ ರಾಜೀನಾಮೆಯನ್ನು ಪಡೆದುಕೊಂಡು ಈಗಾಗಲೇ ಎಸ್.ಐ.ಟಿ ತನಿಖೆಗೆ ನೀಡಿರುತ್ತಾರೆ. ತಮ್ಮ ಸರಕಾರದ ಅವಧಿಯಲ್ಲಿ 40% ಕಮಿಷನ್ ದಂಧೆಯಿಂದ ಕಂಟ್ರಾಕ್ಟರ್ ಆತ್ಮಹತ್ಯೆ ಪ್ರಕರಣ, ಅನೇಕ ಬ್ರಹ್ಮಾಂಡ ಭ್ರಷ್ಟಚಾರದ ಬಗ್ಗೆ, ಉಡುಪಿ ಜಿಲ್ಲಾ ಕುಂದಾಪುರ ತಾಲೂಕಿನಲ್ಲಿ ಆದ ಉದಯಗಾಣಿಗ ಕೊಲೆಯ ಬಗ್ಗೆ, ತಮ್ಮ ಕ್ಷೇತ್ರದಲ್ಲಿ ಆದ ಅವ್ಯವಹಾರದ ಬಗ್ಗೆ, ಸರಕಾರಿ ಜಾಗದ ಅಕ್ರಮ ಗಣಿಗಾರಿಕೆ, ಅಕ್ರಮ ಮರಳುಗಾರಿಕೆ ಬಗ್ಗೆ ಮಾತನಾಡದ ತಾವು ತಮ್ಮ ಕ್ಷೇತ್ರದಲ್ಲಿ ತಾವು ಮಾಡಿದ ಭ್ರಷ್ಟಾಚಾರವನ್ನು ನುಂಗಿ ಇನ್ನೊಬ್ಬರಿಗೆ ಬೊಟ್ಟು ಮಾಡುವಂತಹದು ತಮ್ಮ ಹಾಗೂ ಬಿಜೆಪಿಯ ಚಾಳಿಯಾಗಿರುತ್ತದೆ ಎಂದು ಟೀಕಿಸಿದ್ದಾರೆ.
ಕೆಲವೊಂದು ಸರಕಾರಿ ಜಾಗ ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಕ್ಕೂ ಕೂಡ ಸುಮಾರು 5 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ರಸ್ತೆಗೆ ತಾವು ಕಾರ್ಕಳ ನಂದಳಿಕೆ ಬೋರ್ಡ್ ಶಾಲೆಯಿಂದ ಸೂಡ ಕ್ರಶರ್‌ವರೆಗೆ ಜನರು ತೆರಿಗೆ ಪಾವತಿಸಿದ ಸುಮಾರು 11 ಕೋಟಿ ಹಣದಲ್ಲಿ ರಸ್ತೆ, ಕಾಂಕ್ರೀಟ್ ಮಾಡಿರುವ ಬಗ್ಗೆ, ಸಮಗ್ರ ತನಿಖೆಯಾಗಲಿ ಹಾಗೂ ಕಳೆದ ಹತ್ತು ವರ್ಷಗಳಲ್ಲಿ ತಾವು ಶಾಸಕರಾಗಿದ್ದ ಕಾರ್ಕಳ ಕ್ಷೇತ್ರದ ಅಕ್ರಮಗಳ ಬಗ್ಗೆ ತನಿಖೆಯಾಗಲಿ ಎಂದರು.
ಸುಳ್ಳು ಹಾಗೂ ಭ್ರಷ್ಟಾಚಾರ ಜನರನ್ನು ದಾರಿ ತಪ್ಪಿಸುವ ಹೇಳಿಕೆ ನಿಮ್ಮ ಪಕ್ಷದ ಅಜೆಂಡವಾಗಿದೆ. ನಿಮಗೆ ನೈತಿಕತೆಯಿದ್ದರೆ ದೇವರ ಹೆಸರು ಹೇಳಿ ಮತ ಕೇಳುವ ನೀವು, ಬಾಯೆತ್ತಿದರೆ ಸಂಸ್ಕೃತಿ ಸಂಸ್ಕಾರದ ಬಗ್ಗೆ ಮಾತನಾಡುವ ತಾವು ಸಾಧ್ಯವಾದರೆ ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಇರುವ ಪರಶುರಾಮನ ಫೈಬರ್ ನ ಮೂರ್ತಿಯ ಬದಲು ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿ ಅದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಕೇಳುವ ನೈತಿಕತೆ ನಿಮಗಿಲ್ಲ ಎಂದಿದ್ದಾರೆ.