ಮಲ್ಪೆ ಬಂದರಿನೊಳಗೆ ಸಂಜೆ ವಾಹನಗಳ ಸಂಚಾರಕ್ಕೆ ನಿಷೇಧ
ಉಡುಪಿ ಜೂ.8 (ಉಡುಪಿ ಟೈಮ್ಸ್ ವರದಿ): ಸರಕಾರಿ ಅಧಿಸೂಚನೆಯಂತೆ ಜೂ.1 ರಿಂದ ಜು.31 ರವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿರು ವುದರಿಂದ ಬಂದರಿನಲ್ಲಿ ಅಗತ್ಯ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವ ಬಗ್ಗೆ ಮೀನುಗಾರರು ಮತ್ತು ವಿವಿಧ ಅಧಿಕಾರಿಗಳ ಸಮಾಲೋಚನಾ ಸಭೆಯು ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ನಡೆಯಿತು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಮಾತನಾಡಿ, ಬಂದರಿನಲ್ಲಿ ಕೋಟ್ಯಂತರ ಮೌಲ್ಯದ ಸಾವಿರಾರು ಬೋಟುಗಳಿದ್ದು ಸುರಕ್ಷೆಯ ದೃಷ್ಟಿಯಿಂದ ರಾತ್ರಿ ವೇಳೆ ಬಂದರು ವ್ಯಾಪ್ತಿಯಲ್ಲಿ ನಿತ್ಯ ಪೊಲೀಸ್ ಗಸ್ತು ಇರಿಸಬೇಕು ಮತ್ತು ಯಾವುದೇ ರೀತಿಯಲ್ಲಿ ಆಕಸ್ಮಿಕ ಅಗ್ನಿ ಅವಘಡಗಳನ್ನು ಉಂಟಾಗದಂತೆ ಅದನ್ನು ನಿಯಂತ್ರಿಸಲು ಅಗ್ನಿ ಶಾಮಕದಳ ಸನ್ನದ್ಧರಾಗಿರಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್. ಅವರು ಮಾತನಾಡಿ, ಸರಕಾರಿ ಅಧಿಸೂಚನೆಯಂತೆ ಜೂ.1ರಿಂದ ಜು.31ರವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿರುವುದರಿಂದ ಮಲ್ಪೆ ಬಂದರಿನಲ್ಲಿ ಬೋಟ್‍ಗಳ ಸುರಕ್ಷತೆಯ ಬಗ್ಗೆ ಅಗತ್ಯ ಪೂರ್ವ ಸಿದ್ಧತೆ ಮತ್ತು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗು ವುದು. ಯಾವುದೇ ಕಳ್ಳತನ, ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಉಡುಪಿ ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಆರ್. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಲ್ಪೆ ಬಂದರಿನಲ್ಲಿ ಸುರಕ್ಷತೆ ಹಾಗೂ ಇತರ ವಿಚಾರಗಳ ಕುರಿತು ಚರ್ಚಿಸಲಾಯಿತು. ಬೋಟು ಮಾಲಕರು ತಮ್ಮ ಬೋಟ್‍ಗಳ ರಿಪೇರಿ ಸಂದರ್ಭದಲ್ಲಿ ಜನರೇಟರ್ ಉಪಯೋಗಿಸಲು ಮೀನುಗಾರಿಕೆ ಇಲಾಖೆಯ ಅನುಮತಿ ಪಡೆದು ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಅವಕಾಶ, ಸೀ ವಾಕ್‍ವೇ ಗೆ ಸಂಚಾರಿಸುವ ವಾಹನಗಳನ್ನು ತಪಾಸಣೆ ನಂತರ ಪ್ರವೇಶಕ್ಕೆ ಅನುಮತಿ ಕುರಿತು ತೀರ್ಮಾನಿಸಲಾಯಿತು.
ಹಾಗೂ ಸಂಜೆ 6 ಗಂಟೆ ಬಳಿಕ ಬಂದರಿನೊಳಗೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗುವುದು. ಬಂದರಿನಲ್ಲಿ ರಾತ್ರಿ ಪೊಲೀಸ್ ಗಸ್ತು ತಿರುಗುವುದು, ಅಗ್ನಿ ಶಾಮಕ ದಳ ಸನ್ನದ್ಧರಾಗಿರುವುದು, ಬಂದರಿನ ಎಲ್ಲ ಡಿಸೇಲ್ ಬಂಕ್‍ಗಳಲ್ಲಿ ಕಾವಲುಗಾರರನ್ನು ನೇಮಿಸುವುದು ಮತ್ತು ದಿನದ 24 ಗಂಟೆ ಸಿ.ಸಿ. ಕ್ಯಾಮರ ಕಾರ್ಯ ನಿರತವಾಗುವಂತೆ ನೋಡಿ ಕೊಳ್ಳುವ ಕುರಿತು ನಿರ್ಣಯಿಸಲಾಯಿತು.
ಜೊತೆಗೆ ಹೊರರಾಜ್ಯದ ಬೋಟ್‍ಗಳು ತುರ್ತು ಪರಿಸ್ಥಿತಿ ಹೊರತು ಪಡಿಸಿ, ಉಳಿದ ಸಂದರ್ಭದಲ್ಲಿ ಮಲ್ಪೆ ಬಂದರಿನೊಳಗೆ ಪ್ರವೇಶಿಸುವುದು ಮತ್ತು ಮೀನು ಖಾಲಿ ಮಾಡುವುದಕ್ಕೆ ನಿಷೇಧವನ್ನು ಹೇರಲಾಗುವುದು. ಜತೆಗೆ ಬಂದರಿನೊಳಗೆ ಯಾವುದೇ ಚಲನಚಿತ್ರ ಚಿತ್ರೀಕರಣ ಮಾಡದಂತೆ ನಿಷೇಧ ಹೇರುವ ಕುರಿತು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಸಭೆಯಲ್ಲಿ ಮೀನುಗಾರರ ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರ್, ನಾಡದೋಣಿ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಗೋಪಾಲ್ ಆರ್.ಕೆ., ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಡೀಪ್‍ಸೀ ಟ್ರಾಲ್ ದೋಣಿ ಮೀನುಗಾರರ ಅಸೋಸಿ ಯೇಷನ್ ಅಧ್ಯಕ್ಷ ಸುಭಾಷ್ ಮೆಂಡನ್, ಆಳಸಮುದ್ರ ಬೋಟ್ ಮಾಲಕರ ಸಂಘದ ಕಾರ್ಯದರ್ಶಿ ಹರಿಶ್ಚಂದ್ರ, ಮೀನುಗಾರಿಕೆ ಉಪ ನಿರ್ದೇಶಕಿ ಸವಿತಾ ಖಾದ್ರಿ ಕೆ.ಎಸ್, ಯಾಂತ್ರಿಕ ಟ್ರಾಲ್ ಮೀನುಗಾರರ ಸಹಕಾರ ಸಂಘದ ನಿರ್ದೇಶಕ ಕಿಶೋರ್ ಡಿ.ಸುವರ್ಣ, ಪರ್ಸೀನ್ ಮೀನು ಗಾರರ ಸಂಘದ ಉಪಾಧ್ಯಕ್ಷ ಮಧುಕರ್ ಸುವರ್ಣ, ವಿವಿಧ ಮೀನುಗಾರ ಸಂಘಟನೆಗಳು ಪ್ರತಿನಿಧಿಗಳು, ಮಲ್ಪೆ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಪಡೆ, ಅಗ್ನಿಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.