ವಿಧಾನ ಪರಿಷತ್ ಚುನಾವಣಾ ಗೆಲುವು : ಉಡುಪಿ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ
ಉಡುಪಿ ಜೂ.7 (ಉಡುಪಿ ಟೈಮ್ಸ್ ವರದಿ): ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಡಾ. ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಅವರ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಮಾತನಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ಈ ಬಾರಿಯ ಚುನಾವಣೆ ಸಾಬೀತುಪಡಿಸಿದೆ. ನಾನು ಮುಂದಿನ 3 ವರ್ಷದ ಅವಧಿಗೆ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದಾಗ ಇದು ಚುನಾವಣೆ ಪರ್ವ ಎಂದಿದ್ದೆ. ಈಗಾಗಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಅಂತರದಿಂದ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ. ಗೆಲುವಿನ ಅಂತರ ಸ್ವತಃ ಅಭ್ಯರ್ಥಿಯನ್ನೇ ಅಚ್ಚರಿಗೊಳಿಸಿದೆ. ಇತ್ತೀಚೆಗೆ ನಡೆದ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್.ಡಿ.ಎ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸುವ ಮೂಲಕ ನಮ್ಮದು ಗೆಲುವಿನ ಪರ್ವವಾಗಿ ಮಾರ್ಪಟ್ಟಿದೆ ಎಂದರು.
ಹಾಗೂ ಅಭ್ಯರ್ಥಿಯ ಆಯ್ಕೆ ಸಂದರ್ಭದಲ್ಲಿ ಆಸೆ, ಆಕಾಂಕ್ಷೆಗಳು ಸಹಜ. ಆದರೆ, ಪಕ್ಷ ಅಭ್ಯರ್ಥಿ ಆಯ್ಕೆ ಮಾಡಿದ ಬಳಿಕ ಅವರನ್ನು ಬೆಂಬಲಿಸುವುದು ಪಕ್ಷ ನಿಷ್ಠೆ ಮತ್ತು ಧರ್ಮ ಎಂದೆನಿಸುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬದ್ಧತೆಯಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಪ್ರಚಂಡ ಗೆಲುವು ಸಾಧಿಸಿದ ಡಾ. ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯವರೇ ಆದ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧೆಗಿಳಿದಾಗ ಸ್ವಲ್ಪ ಆತಂಕವಿತ್ತು. ಆದರೆ, ಭಟ್ ಅವರ ಅಭಿಮಾನಿಗಳಾಗಿದ್ದರೂ ಕಾರ್ಯಕರ್ತರು ಪಕ್ಷ ಬೆಂಬಲಿತ ಅಭ್ಯರ್ಥಿಯನ್ನೇ ಬೆಂಬಲಿಸಿದ್ದಾರೆ. ಜೊತೆಗೆ ಮೈತ್ರಿ ಅಭ್ಯರ್ಥಿಯ ಗೆಲುವಿಗೂ ಕಾರಣರಾಗಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಚಿಂತನೆಯ ಪಕ್ಷದ ತತ್ವಕ್ಕೆ ವಿರೋಧವಾಗಿ ಪಕ್ಷ ತ್ಯಜಿಸಿದವರಿಗೆ ಏನಾಗುತ್ತದೆ ಎಂಬುದು ಈ ಬಾರಿಯ ಚುನಾವಣೆ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಿಟ್ಟು ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಈ ಬಾರಿಯ ಗೆಲುವು ಪಕ್ಷದ ಕಾರ್ಯಕರ್ತರಿಗೆ ಸಂದ ಜಯ ಎಂದು ಬಣ್ಣಿಸಿದರು. ಹಾಗೂ ನೈರುತ್ಯ ಪದವೀಧರ ಕ್ಷೇತ್ರವನ್ನು ಬಿಜೆಪಿ 1988ರಿಂದ ಸತತವಾಗಿ ಗೆಲ್ಲುತ್ತಾ ಬಂದಿದೆ. ಎಷ್ಟೇ ಪ್ರಭಾವಿಗಳಾದರೂ ಗೆಲುವಿಗೆ ಪಕ್ಷದ ಆಸರೆ ಅತ್ಯಗತ್ಯ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಪಕ್ಷ ಎಲ್ಲವನ್ನೂ ಗಮನಿಸುತ್ತದೆ. ಬಿಜೆಪಿ ಕಾರ್ಯಕರ್ತರು ನಿಶ್ಚಯ ಮಾಡಿದ ಮೇಲೆ ಗೆಲುವು ಶತಸಿದ್ಧ. ಬಿಜೆಪಿ ಹಾಗೂ ಎನ್.ಡಿ.ಎ ಸಮರ್ಥ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿರುವ ಪ್ರಜ್ಞಾವಂತ ಪದವೀಧರ ಮತ್ತು ಶಿಕ್ಷಕ ಮತದಾರರು ಹಾಗೂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಸಂಘಟಿತ ಪ್ರಯತ್ನದ ಮೂಲಕ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಅವಿರತ ಶ್ರಮ ವಹಿಸಿರುವ ಪಕ್ಷದ ವರಿಷ್ಠರು, ಜಿಲ್ಲಾ ನಾಯಕರು, ಶಾಸಕರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷರುಗಳಾದ ಮಟ್ಟಾರ್ ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಅನಿತಾ ಶ್ರೀಧರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರ ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ನಗರ ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮೀಶ ಬಂಗೇರ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ, ಪಕ್ಷದ ಪ್ರಮುಖರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾಜೇಶ್ ಕಾವೇರಿ, ದೇವಿಪ್ರಸಾದ್ ಶೆಟ್ಟಿ, ಶೈಲೇಂದ್ರ ಶೆಟ್ಟಿ, ಆಸಿಫ್ ಕಟಪಾಡಿ, ದಾವೂದ್ ಅಬೂಬಕರ್, ಅಜಿತ್ ಕುಮಾರ್, ಸುರೇಶ್ ಮಲ್ಪೆ, ರುಡಾಲ್ಫ್ ಡಿಸೋಜ, ಡೇನಿಸ್ ಮಾಸ್ಕರೇನಸ್, ರಾಜೇಂದ್ರ ಪಂದುಬೆಟ್ಟು, ಮಂಜುನಾಥ್ ಮಣಿಪಾಲ್, ಆನಂದ ಸುವರ್ಣ, ಗುರುಪ್ರಸಾದ್, ಜಯಕರ್, ನಿತಿನ್ ಪೈ, ಸುಭಾಷಿತ್ ಕುಮಾರ್, ಚಿನ್ಮಯಮೂರ್ತಿ, ದಯಾಶಿನಿ, ಪೂರ್ಣಿಮಾ ಶೆಟ್ಟಿ, ಭಾರತಿ ಚಂದ್ರಶೇಖರ್, ಸುಧಾ ಪೈ, ಸರೋಜಾ ಶೆಣೈ, ಸುಜಾಲ ಸತೀಶ್, ಶಾಂತಿ ಮನೋಜ್, ಸುಗುಣಾ ನಾಯ್ಕ್, ಮಂಜುಳಾ ಪ್ರಸಾದ್, ಗ್ರೇಟ್ಟಾ ಮಾಸ್ಕರೇನಸ್, ದೀಪಾ ಪೈ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.