ನಿತ್ಯ ಸಾಮಗ್ರಿಗಳಿಗಾಗಿ ಹಳ್ಳಿ ಜನರ ಪಾದಯಾತ್ರೆ: ಕುಂದಾಪುರ, ಬೈಂದೂರು ಶಾಸಕರೆಲ್ಲಿ?

ಉಡುಪಿ ಮೇ.10 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕುಂದಾಪುರ ಜನರಿಂದ ಲಾಕ್ ಡೌನ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದೂ. ಕುಂದಾಪುರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಪೇಟೆಗಳು ಬಿಕೋ ಎನ್ನುತ್ತಿದೆ.

ಇಂದು ಮುಂಜಾನೆ ಹಳ್ಳಿಯಿಂದ ಮನೆಗೆ ಸಾಮಗ್ರಿ, ತರಕಾರಿ ತರಲು ಜನರು ನಡೆದುಕೊಂಡೇ ಬರುತ್ತಿದ್ದ ದೃಶ್ಯ ಕಂಡು ಬಂದಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದ್ದು, ಸುಖಾ ಸುಮ್ಮನೆ ರೋಡಿಗಿಳಿಯುವ ಜನರಿಗೆ ಖಾಕಿ ಪಡೆಯಿಂದ ಗಾಡಿ ಸೀಜ್ ಹಾಗೂ ಇಲ್ಲಿ ರೋಡಿಗಿಳಿಯದಂತೆ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿದೆ. ಇನ್ನೊಂದು ಕಡೆಯಲ್ಲಿ ಕುಂದಾಪುರ ಹಾಗೂ ಬೈಂದೂರು ಅತೀ ಹೆಚ್ಚು ಹಳ್ಳಿ‌‌‌‌ ಪ್ರದೇಶಗಳನ್ನು ಹೊಂದಿರುವ ತಾಲೂಕು. ಈ ಭಾಗದಲ್ಲಿ ಇಂದು ಮುಂಜಾನೆ ಹಳ್ಳಿ ಪರಿಸರದಲ್ಲಿ ಜನರು ನಡೆದುಕೊಂಡೇ ಹತ್ತಿರದ ಅಂಗಡಿಗಳಿಗೆ ಬಂದು ಅಗತ್ಯ ಸಾಮಾಗ್ರಿಗಳನ್ನು ಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

ಇನ್ನೂ ಸರಕಾರದ ನಿಯಮದ ಪ್ರಕಾರ ಜನರು ಸ್ಥಳೀಯ ಅಂಗಡಿಗಳಲ್ಲಿ ನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗಬೇಕು. ಆದರೆ ಸ್ಥಳೀಯ ಅಂಗಡಿಗಳಲ್ಲಿ ಅಲ್ಲಿನ ಸುತ್ತಮುತ್ತಲ ಮನೆಗಳಿಗೆ ಅಗತ್ಯ ವಿರುವ ವಸ್ತುಗಳು ಸಿಗಬೇಕಾದರೆ ಅವರು ನಗರದಿಂದ ಸಾಮಾಗ್ರಿಗಳನ್ನು ತರುವುದು ಅಗತ್ಯವಾಗಿದೆ. ಆದರೆ ನಗರಗಳಲ್ಲಿ ವಾಹನಗಳಲ್ಲಿ ಸಂಚಾರ ಮಾಡಿದರೆ ವಾಹನವನ್ನು ಸೀಝ್ ಮಾಡಲಾಗುತ್ತಿದೆ. ಹೀಗಿರುವಾಗ ಸ್ಥಳೀಯ ಅಂಗಡಿಗಳಲ್ಲಿ ಅಗತ್ಯ ವಸ್ತುಗಳು ಸಿಗುವುದಾದರೂ ಹೇಗೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮಂಗಳೂರಿನಲ್ಲಿ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಮಾರ್ಗಸೂಚಿಗಳು ಪರಿಷ್ಕ್ರತಗೊಂಡಿದೆ. ಆದರೆ ಅತ್ಯಂತ ಹೆಚ್ಚು ಗ್ರಾಮೀಣ ಪ್ರದೇಶಗಳನ್ನ ಒಳಗೂಂಡ ಉಡುಪಿ ಜಿಲ್ಲೆಯಲ್ಲಿ ಮುಂಜಾನೆ ಅಗತ್ಯ ವಸ್ತುಗಳನ್ನು ಪಡೆಯಲು ಜನ ತಮ್ಮ ಕಾಲುಗಳನ್ನೇ ನಂಬಿಕೊಳ್ಳ ಬೇಕಾದ ಸ್ಥಿತಿ. ಈ ಕುರಿತು ಸರಕಾರದ ಮನವಿ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹಾಗೂ ಶಾಸಕ ರಘುಪತಿ ಭಟ್ ಪತ್ರಕರ್ತರಿಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ಇನ್ನೂವರೆಗೆ ಬಂದಿಲ್ಲ.

ಅದರಲ್ಲೂ ಅತೀ ಹೆಚ್ಚು ಗ್ರಾಮೀಣ ಪ್ರದೇಶವನ್ನು ಹೊಂದಿದ ಕುಂದಾಪುರ ಹಾಗು ಬೈಂದೂರು ತಾಲೂಕಿನ ಅನೇಕ ಹಳ್ಳಿಗಳಲ್ಲಿ ಯಾವುದೇ ಆಟೋ ಸೇವೆಗಳಾಗಲಿ, ಹತ್ತಿರದಲ್ಲಿ ಅಂಗಡಿಗಳಾಗಲಿ ಇಲ್ಲದೆ ಇಲ್ಲಿನ ಜನರು ತಮ್ಮಲ್ಲಿ ಇರುವ ದ್ವಿಚಕ್ರ ವಾಹನಗಳನ್ನು ನಂಬಿಕೊಂಡಿದ್ದಾರೆ. ಆದರೆ ಸರಕಾರದ ಆದೇಶದ ಪ್ರಕಾರ ಬೆಳಗಿನ ಸಮಯದಲ್ಲಿ ದಿನಸಿ ತರಲು ನಡೆದುಕೊಂಡೇ ಬರಬೇಕು ಎನ್ನುವ ಕಟ್ಟುನಿಟ್ಟಿನ ಆದೇಶ ಜನರನ್ನು ಉಸಿರುಗಟ್ಟಿಸುತ್ತಿದ್ದೆ. ತಮಗೂ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ವಾಹನವನ್ನು ರಸ್ತೆಗಳಿಗಿಳಿಸಲು ಬಿಡಿ ಎಂದು ಆಗ್ರಹಿಸುತ್ತಿದ್ದಾರೆ. ತಮ್ಮ ಈ ಕಷ್ಟ ಸಮಯದಲ್ಲಿ ತಮಗಾಗಿ ಸ್ಪಂದಿಸಬೇಕಾದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸುಮ್ಮನಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ 14 ದಿನಗಳ ಕಾಲ ಜನರು ಹೀಗೆ ನಡೆದುಕೊಂಡು ಬಂದು ಬೇಕಾದ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವುದು ಸಾಧ್ಯವಿದೆಯೇ? ಈ ಪರಿಸ್ಥಿತಿ ಯಲ್ಲಿ ಹಳ್ಳಿ ಪ್ರದೇಶ ಗಳೇ ಹೆಚ್ಚಾಗಿರುವ ಬೈಂದೂರು, ಕುಂದಾಪುರದಂತಹ ಪ್ರದೇಶದಲ್ಲಿ ಜನರ ಪಾಡು ಏನು? ನಿರ್ದಿಷ್ಟವಾದ ಯಾವುದೇ ರೀತಿಯಲ್ಲಿ ಜನರ ಗೊಂದಲಕ್ಕೆ ಪರಿಹಾರ ಸಿಗುತ್ತಿಲ್ಲ. ಇನ್ನು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಸಹಕರಿಸಬೇಕಾದ ಶಾಸಕರೇ ಹೀಗೆ ಮೌನವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!