ಶಂಕರನಾರಾಯಣ: ಗೇರು ಬೀಜ ಖರೀದಿಸಿ ಸಂಸ್ಥೆಗೆ 48.85 ಲ.ರೂ ವಂಚನೆ

ಶಂಕರನಾರಾಯಣ ಜೂ.6 (ಉಡುಪಿ ಟೈಮ್ಸ್ ವರದಿ): ಗೇರು ಬೀಜ ಸಂಸ್ಕರಣೆಯ ಘಟಕದಿಂದ 48.85 ಲ.ರೂ ಮೊತ್ತದ ಸಂಸ್ಕರಿಸಿದ ಗೇರು ಬೀಜವನ್ನು ಖರೀದಿಸಿ ಹಣವನ್ನು ನೀಡದೇ ವಂಚಿಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ವಂಚನೆಗೆ ಒಳಗಾದ ಕುಂದಾಪುರದ ಹೆಂಗವಳ್ಳಿ ಗ್ರಾಮದ ಹೆಚ್. ನಾಗರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರು “ಮಲ್ನಾಡ್ ಕ್ಯಾಶ್ಯೂಸ್” ಸಂಸ್ಥೆಯ ಆಡಳಿತ ಪಾಲುದಾರರಾಗಿದ್ದು, ಈ ಸಂಸ್ಥೆಯು ಕುಂದಾಪುರದ ಹೆಂಗವಳ್ಳಿ ಗ್ರಾಮದಲ್ಲಿ ಗೇರು ಬೀಜ ಸಂಸ್ಕರಣೆಯ ಘಟಕವನ್ನು ನಡೆಸಿಕೊಂಡಿರುತ್ತದೆ.

ಮಹಾವೀರ ಟ್ರೇಡಿಂಗ್ ಕಂಪೆನಿ ಮುಂಬೈ ಇದರ ಮಾಲಿಕಳಾದ ಭಾರತಿ ನೀಲೇಶ್ ಸಾವ್ಲಾ ಮತ್ತು ಆಕೆಯ ಪತಿ ನೀಲೇಶ್ ನಿರಂಜನ್ ಸಾವ್ಲಾ ಮತ್ತು ಸಂಬಂಧಿ ಪಿಯುಷ್ ಗೋಗ್ರಿಯು ಪ್ರಕರಣದ ಆರೋಪಿಗಳು. ಆರೋಪಿತೆ ಸಂಸ್ಕರಿಸಿದ ಗೇರುಬೀಜವನ್ನು ಬೇರೆ ಬೇರೆ ಗೇರುಬೀಜ ಸಂಸ್ಕರಣಾ ಘಟಕಗಳಿಂದ ಕ್ರಯಕ್ಕೆ ಪಡೆದು ಮಾರಾಟ ಮಾಡುವ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದು, ಆರೋಪಿತಳಾದ
ಭಾರತಿ ನೀಲೇಶ್ ಸಾವ್ಲಾ ಪ್ರಮಾಣಿಕ ವ್ಯವಹಾರಸ್ಥಳು ಅವಳಿಗೆ ಸಂಸ್ಕರಿಸಿದ ಗೇರುಬೀಜವನ್ನು ಮಾರಾಟ ಮಾಡಬಹುದು ಎಂದು ದಳ್ಳಾಲಿಯಾಗಿದ್ದ ನಿತೀಶ್ ಕೆ. ಟಕ್ಕರ್ ರವರು ಮಾಡಿದ ಶಿಫಾರಸ್ಸಿನ ಮೇರೆಗೆ ಹೆಚ್. ನಾಗರಾಜ್ ಅವರ ಸಂಸ್ಥೆಯ ಮೂಲಕ ಕಳೆದ ಸುಮಾರು 15 ವರ್ಷಗಳಿಂದ 1ನೇ ಆರೋಪಿತೆಗೆ ಸಂಸ್ಕರಿಸಿದ ಗೇರುಬೀಜವನ್ನು ಉದ್ದರಿ ರೂಪದಲ್ಲಿ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ. ಈ ವರೆಗೆ ಸಂಸ್ಥೆಯಿಂದ ರೂ. 48,85,650/- ಮೊತ್ತದ ಸಂಸ್ಕರಿಸಿದ ಗೇರು ಬೀಜವನ್ನು ಕ್ರಯಕ್ಕೆ ಮಾರಟ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಮೊತ್ತವನ್ನು 15 ದಿನಗಳ ಒಳಗಾಗಿ ನೀಡುವುದಾಗಿ ಭರವಸೆ ನೀಡಿ ಈವರೆಗೂ ನೀಡದೇ ವಂಚಿಸಿರುವುದಾಗಿ ನೀಡಿದ ದೂರಿನಂತೆ ಶಂಕರನಾರಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!