ಜೂ.9- ಸುರತ್ಕಲ್ ಬಂಟರ ಸಂಘದ ಮಹಾಸಭೆ
ಸುರತ್ಕಲ್ ಜೂ.3(ಉಡುಪಿ ಟೈಮ್ಸ್ ವರದಿ) : ಬಂಟರ ಸಂಘ ಸುರತ್ಕಲ್ ಇದರ 24 ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜೂ. 9 ರಂದು ಸಂಜೆ 5 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಬೆಳಿಗ್ಗೆ 9.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 10.30 ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸುರತ್ಕಲ್ ಬಂಟರ ಸಂಘದ ಗ್ರಾಮವಾರು ಸಾಂಸ್ಖೃತಿಕ ಸ್ಪರ್ಧೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಮಾರಂಭವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಕರುಣಾಕರ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಗಳಾಗಿ ಶಾಸಕ ಡಾ ವೈ ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬೆಂಗಳೂರು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಮಾರ್ಲ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಅಭಿನಂದನೆ, ನಿರಂತರ ವಿದ್ಯಾರ್ಥಿ ವಿತರಣೆ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ, ನೂತನ ಮನೆಯ ಕೀ ಹಸ್ತಾಂತರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.