ಉಡುಪಿ: ಶಿಕ್ಷಕರ ಕ್ಷೇತ್ರದ ಚುನಾವಣೆ- ಪಕ್ಷೇತರ ಅಭ್ಯರ್ಥಿಯಾಗಿ ಹೃದ್ರೋಗ ತಜ್ಞ ಪ್ರೊ. ಡಾ.ನರೇಶ್ಚಂದ್ ಹೆಗ್ಡೆ ಕಣಕ್ಕೆ

ಉಡುಪಿ ಮೇ 31 (ಉಡುಪಿ ಟೈಮ್ಸ್ ವರದಿ): ರಾಜ್ಯದಾದ್ಯಂತ ಜೂ.3 ರಂದು ನಡೆಯಲಿರುವ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹೆಬ್ರಿ ಬೀಡುವಿನ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ. ಡಾ.ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜು, ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ, ಭಾಷಾ ಮಾಧ್ಯಮದ, ಬೋಧಕ ವೃಂದದ, ಬೋಧಕೇತರರ, ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾಸಂಸ್ಥೆಗಳ, ಆಡಳಿತ ಮಂಡಳಿಗಳ ಬಹುಮುಖಿ ಸಮಸ್ಯೆಗಳನ್ನು ಆಯಾ ವರ್ಗದಲ್ಲಿ ತಜ್ಞರೆನಿಸಿದವರಿಂದ ಸಲಹೆ ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಭರವಸೆಯನ್ನು ನೀಡಿದ್ದಾರೆ. ಹಾಗೂ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಹಕಾರ, ಮಾರ್ಗದರ್ಶನ ಮತ್ತು ಉತ್ತೇಜನ ನೀಡುವಂತೆ ಮತದಾರರಲ್ಲಿ ಕೇಳಿಕೊಂಡರು.

ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್, ಎಂ.ಎಸ್ (ಸರ್ಜರಿ) ಮತ್ತು ಎಂ.ಸಿ.ಎಚ್ (ಸಿ.ಟಿ.ವಿ.ಎಸ್) ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಇವರು ಈ ವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಮೆಲಕಾ-ಮಣಿಪಾಲ ಮೆಡಿಕಲ್ ಕಾಲೇಜು ಮಲೇಷ್ಯಾ, ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ಸಂಸ್ಥೆ, ಬೆಂಗಳೂರು, ಶ್ರೀ ಗೋಕುಲಂ ಸ್ಪೆಷಾಲಿಟಿ ಆಸ್ಪತ್ರೆ ಸೇಲಂ ತಮಿಳಾಡು, ಶ್ರೀ ರಾಜರಾಜೇಶ್ವರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಬೆಂಗಳೂರು ಮೊದಲಾದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕ, ಪ್ರಾದ್ಯಾಪಕ, ಸಮಾಲೋಚಕ ಮತ್ತು ಹಿರಿಯ ಕುಲಸಚಿವ ಮೊದಲಾದ ಶೈಕ್ಷಣಿಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಬಹುಬೇಡಿಕೆಯ ಬಿ.ಎಸ್ಸಿ ಮತ್ತು ಎಂ.ಎಸ್ಸಿ (ಪಪ್ರ್ಯೂಷನ್ ಟೆಕ್ನಾಲಜಿ )ಕೋರ್ಸ್ ಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಶಿಷ್ಟಾಚಾರ ನಿಯಮಗಳನ್ನು ರಚಿಸುವ ಮೂಲಕ ಉನ್ನತ ಶಿಕ್ಷಣದ ಪಠ್ಯ ರಚನಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರು ವೈದ್ಯಕೀಯ ವಿದ್ಯಾರ್ಥಿಯಾಗಿರುವಾಗಲೇ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್‍ಗೆ ವಿದ್ಯಾರ್ಥಿ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗುವ ಸದಾವಕಾಶ ಪಡೆದುಕೊಂಡರು. ಹಾಗೂ ಮಣಿಪಾಲ ಕೆ.ಎಂ.ಸಿ ಯ ಇಂಟರ್ನ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!