ಬೈಂದೂರು: ಅಕ್ರಮ ಮರಳು ಸಾಗಾಟ-ದೂರು ದಾಖಲು
ಬೈಂದೂರು ಮೇ 30(ಉಡುಪಿ ಟೈಮ್ಸ್ ವರದಿ): ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡಿದರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಂದೂರು ಠಾಣಾ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಬೆಳಿಗ್ಗೆ ಶುಭಾದ ಶಾಲೆ ಎಂಬಲ್ಲಿ ಸಮುದ್ರ ಬದಿಯಲ್ಲಿ ಇಸ್ಮಾಯಿಲ್ ಎಂಬಾತ ಸಮುದ್ರ ತೀರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಕಿರಿಮಂಜೇಶ್ವರ ಅಂಡಾರ್ ಪಾಸ್ ಬಳಿ ಬರುತ್ತಿದ್ದ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಈ ವೇಳೆ ವಾಹನ ತಪಾಸಣೆ ನಡೆಸಿದಾಗ ವಾಹನದ ಹಿಂಬದಿ ಮರಳು ಖಾಲಿ ಮಾಡಿ ಬಂದಿರುವಂತೆ ಕಂಡು ಬಂದಿರುತ್ತದೆ. ಈ ಬಗ್ಗೆ ಚಾಲಕ ಇಸ್ಮಾಯಿಲ್ ಎಂಬಾತನ ಬಳಿ ವಿಚಾರಿಸಿದಾಗ ಆತನು, ಕಿರಿಮಂಜೇಶ್ವರ ಶ್ಯಾಮಲಾ ಮತ್ತು ಮಾದೇವ ಎಂಬುವವರು ಅರಬ್ಬಿ ಸಮುದ್ರದ ದಡದಲ್ಲಿ ಸಂಗ್ರಹಿಸಿಟ್ಟಿರುವ 3 ಯೂನಿಟ್ ಮರಳನ್ನು ಅವರ ಮನೆಗೆ ಸಾಗಿಸಲು ತಿಳಿಸಿದಂತೆ ಸಿ.ಆರ್‌ಜಡ್ ವ್ಯಾಪ್ತಿಯಲ್ಲಿರುವ ಮರಳನ್ನು ಕಳವು ಮಾಡಿ ಸಂಗ್ರಹಿಸಿಟ್ಟು ಅವರ ಮನೆಗಳಿಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಸಾಗಾಟ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.