ಮೈಸೂರು:ವಿವಾಹ ಸಮಾರಂಭಕ್ಕೆ ರೋಬೋಟ್ ಫೋಟೋ ಗ್ರಾಫರ್

ಮೈಸೂರು ಮೇ 30: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಿದ ರೋಬೊಟ್‌ವೊಂದು ಸಿದ್ದಗೊಂಡಿದೆ. 

ವಿಶೇಷ ಅಂದ್ರೆ ಈ ರೋಬೋಟ್ ಮೊಟ್ಟಮೊದಲಿಗೆ ತನ್ನ ಸೃಷ್ಟಿಕರ್ತನಾದ ಬೆಂಗಳೂರಿನ ‘ಇಂಡಿಬೊಟ್ ರೋಬೊಟಿಕ್ಸ್ ಕಂಪನಿ’ ಸಂಸ್ಥಾಪಕ ಸಿದ್ದಯ್ಯ ಸ್ವಾಮಿ ಅವರ ವಿವಾಹದ ಫೋಟೊಗಳನ್ನು ತೆಗೆಯಲಿದೆಯಂತೆ.

ಹೌದು ಬೆಂಗಳೂರಿನ ‘ಇಂಡಿಬೊಟ್ ರೋಬೊಟಿಕ್ಸ್ ಕಂಪನಿ’ ಸಂಸ್ಥಾಪಕ ಸಿದ್ದಯ್ಯ ಸ್ವಾಮಿ ಅವರ ವಿವಾಹ ಕಾವ್ಯಾ ಅವರೊಂದಿಗೆ ಜೂನ್ 2ರಂದು ಜಿಲ್ಲೆಯ ಪಿರಿಯಾಪಟ್ಟಣದ ಸಮೃದ್ಧಿ ಭವನದಲ್ಲಿ ನಡೆಯಲಿದ್ದು, ಫೋಟೊಗ್ರಾಫರ್ ಕೆಲಸವನ್ನು ಈ ರೊಬೋಟ್ ತಾನೇ ಮಾಡಲಿದೆ.

5 ಗಂಟೆಯಿಂದ 8 ಗಂಟೆವರೆಗೆ ಸತತ ಫೋಟೋ ವಿಡಿಯೊ ತೆಗೆಯುವ ಶಕ್ತಿ ಈ ರೋಬೊಟ್‌ಗಿದ್ದು, ಅತಿಥಿಯ ಹೆಸರು ಹಾಗೂ ಫೋನ್ ನಂಬರ್ ನೀಡಿದರೆ, ತಾನೇ ಸಂಗ್ರಹಿಸಿಕೊಂಡ ಮದುವೆ ಆಲ್ಬಂನ ಸಾವಿರ ಫೋಟೊಗಳಲ್ಲಿ ಅವರ ಫೋಟೋಗಳನ್ನು ಹುಡುಕಿ ವಾಟ್ಸ್‌ಆ್ಯಪ್‌ಗೆ ಕಳುಹಿಸಲಿದೆ. ಪ್ರಿಂಟರ್ ಕೂಡ ಇರಲಿದ್ದು, ಚಿತ್ರವನ್ನೂ ಸ್ಥಳದಲ್ಲಿಯೇ ನೀಡುವುದು ಇದರ ಇನ್ನೊಂದು ವಿಶೇಷವಾಗಿದೆ.

ಕೆ.ಆ‌ರ್.ಪೇಟೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್ ಓದಿದ್ದ ಬೀದರ್‌ನ ಔರದ್ ತಾಲ್ಲೂಕಿನ ಸಂತಪುರದ ಸಿದ್ದಯ್ಯ, ಛಾಯಾಗ್ರಾಹಕರಾಗಿ ದಶಕದ ಕಾಲ ಕೆಲಸ ಮಾಡಿದ್ದಾರೆ. ಹೀಗಾಗಿಯೇ ಹೊಸ ಅನ್ವೇಷಣೆ ಮಾಡಿದ್ದಾರೆ.

ತಮ್ಮ ಅನ್ವೇಷಣೆ ಬಗ್ಗೆ ಮಾತನಾಡುವ  ಸಿದ್ದಯ್ಯ ಅವರು, ದಕ್ಷಿಣ ಕೊರಿಯಾದಲ್ಲಿ ಇಂಥವೇ ಮಾದರಿಯ ರೋಬೊಟ್‌ಗಳನ್ನು ನೋಡಿದ್ದೆ. ಅದರ ಸ್ಫೂರ್ತಿ ಪಡೆದು ಸಹ ಸಂಸ್ಥಾಪಕ ಎಂ.ಮನೋಕರನ್ ಅವರೊಂದಿಗೆ ಸೇರಿ ತಂಡದ ಶ್ರಮದಿಂದ ಭಾರತೀಯರ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಲಾಗಿದೆ. ಕ್ಯಾಮೆರಾ, ಫೇಸ್ ರೆಕಗ್ರೆಸರ್, ಟಚ್ ಸ್ಕ್ರೀನ್, ಪ್ರಿಂಟರ್ ಇದ್ದು, ಸುಲಭವಾಗಿ ಎಲ್ಲೆಡೆ ಓಡಾಡುತ್ತದೆ. ಈ ರೋಬೊಟ್‌ಗೆ ನನ್ನ ವಿವಾಹವೇ ಮೊದಲ ವೇದಿಕೆಯಾಗಿದೆ’ ಎಂದು ಹೇಳುತ್ತಾರೆ. 

“ಫೋಟೊಗಳನ್ನು ತೆಗೆಸಿಕೊಂಡವರಿಗೆ ಚಿತ್ರಗಳನ್ನು ಬೇಗನೆ ಕಳುಹಿಸುತ್ತದೆ. ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಕೂಡಲೇ ಪೋಸ್ಟ್ ಮಾಡಿಕೊಳ್ಳುವ ಅವಕಾಶವೂ ಸಿಗಲಿದೆ. ಫೋಟೊಗ್ರಫಿ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು ಬಂದಿವೆ. ಆದರೆ, ಮದುವೆ ಫೋಟೊಗಳನ್ನು ಹಂಚಿಕೊಳ್ಳುವ ವಿಧಾನ ಮಾತ್ರ ಹಳೆಯದ್ದಾಗಿದೆ. ಹೀಗಾಗಿಯೇ ಹೊಸ ಪ್ರಯೋಗ ಮಾಡಲಾಗಿದೆ’.

ಮದುವೆಯಲ್ಲಿ ಜನ ಗಿಜಿಗುಡುವುದರಿಂದ ರಿಮೋಟ್‌ನಿಂದ ಕೂಡ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ. ಬೇರೆಡೆ ಎ.ಐ ಮಾತ್ರವೇ ಎಲ್ಲವನ್ನೂ ಮಾಡುತ್ತದೆ. ಬೆಲೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಕೆಲವೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ’ ಎಂದರು.

6 ತಿಂಗಳ ಹಿಂದೆಯೇ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದು, ರೋಬೊಟ್ ಮದುವೆ ಸಮಾರಂಭದಲ್ಲಿ ಫೋಟೊ ತೆಗೆದರೆ, ರೆಸ್ಟೋರೆಂಟ್‌ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತದೆ. ದತ್ತಾಂಶ ಸಂಗ್ರಹ ಇರಲಿದ್ದು, ನಿಮಗ್ಯಾವ ತಿಂಡಿ ಇಷ್ಟ, ಎಂಬುದನ್ನು ಗುರುತಿಸುತ್ತದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!