ಉಡುಪಿ: ಹೆಚ್ಚಿನ ಹಣಗಳಿಸುವ ಆಸೆಗೆ ಬಿದ್ದು ಮತ್ತೆ ಮೂವರು 16.62 ಲ. ರೂ ಕಳೆದುಕೊಂಡರು
ಉಡುಪಿ ಮೇ 29 (ಉಡುಪಿ ಟೈಮ್ಸ್ ವರದಿ) : ಪಾರ್ಟ್‍ಟೈಮ್ ಜಾಬ್, ಹೂಡಿಕೆ ಆಸೆ ತೋರಿಸಿ ಟಾಸ್ಕ್ ಗಳನ್ನು ನೀಡುವ ನೆಪದಲ್ಲಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮೂವರು ಕಾರ್ಕಳ ಗ್ರಾಮಾಂತರ ಮತ್ತು ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿಯ ರೇಷ್ಮಾ ಎಂಬವರು ಉದ್ಯೋಗನ್ವೆಷಣೆಯಲ್ಲಿರುವಾಗ ಮೇ 22 ರಂದು ವಾಟ್ಸ್ ಆ್ಯಪ್ ಮುಖೇನ ಅಪರಿಚಿತ ವ್ಯಕ್ತಿ ತನ್ನ ಹೆಸರು ಅನೀಶ ಮೀಡಿಯಾ ಏಜೆನ್ಸಿ ರಿಕ್ರೂಟರ್ ಎಂದು ಪರಿಚಯಿಸಿಕೊಂಡು ಲಿಂಕ್ ಕಳುಹಿಸಿ 3 ಆನ್ ಲೈನ್ ಟಾಸ್ಕ್ ನೀಡಿ ಪೂರ್ತಿ ಗೊಳಿಸಿದಲ್ಲಿ ಟಾಸ್ಕ್ ಗೆ ರೂ.120/- ನೀಡುವುದಾಗಿ ತಿಳಿಸಿದ್ದನು. ಇದನ್ನು ನಂಬಿದ ರೇಷ್ಮಾ ಅವರು ಟಾಸ್ಕ್ ಪೂರ್ತಿಗೊಳಿಸಿದ್ದು, ಅದರಂತೆ ರೇಷ್ಮಾ ಅವರ ಖಾತೆಗೆ ರೂ.120/- ವರ್ಗಾವಣೆಯಾಗಿದೆ. ಆ ಬಳಿಕ ಆರೋಪಿಗಳು ಮತ್ತೆ ಲಿಂಕ್ ಕಳುಹಿಸಿ ಪುನಃ ಹೆಚ್ಚಿನ ಟಾಸ್ಕ್ ಬಗ್ಗೆ ಹಣ ಪಾವತಿಸುವಂತೆ ತಿಳಿಸಿದ್ದರು. ಇದನ್ನು ನಂಬಿ ರೇಷ್ಮಾ ಅವರು ಮೇ 23 ರಿಂದ ಮೇ 27ರ ವರೆಗೆ ಹಂತ ಹಂತವಾಗಿ ಒಟ್ಟು ರೂ. 5,91,500/- ಹಣವನ್ನು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಆದರೆ ಆರೋಪಿಗಳು ಉದ್ಯೋಗವನ್ನಾಗಲಿ, ಪಾವತಿಸಿದ ಹಣವನ್ನಾಗಲಿ ನೀಡದೇ ಮೋಸ ಮಾಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ ಅತುಲ ಎಂಬವರಿಗೆ ವಾಟ್ಸ್ ಆ್ಯಪ್ ಮೂಲಕ ಟ್ರೇಡಿಂಗ್ ವ್ಯವಹಾರದ ಬಗ್ಗೆ ತಿಳಿಸಿ ಲಿಂಕ್ ಕಳುಹಿಸಿ, ಈ ಟ್ರೇಡಿಂಗ್ ನಲ್ಲಿ ಕನಿಷ್ಟ 1.50 ಲಕ್ಷ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿದ್ದರು. ಇದನ್ನು ನಂಬಿದ ಅತುಲಾ ಅವರು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್‍ಖಾತೆಗಳಿಗೆ ಒಟ್ಟು ರೂ.2,01,000/- ಹಣವನ್ನು ಡಿಪಾಸಿಟ್ ಮಾಡಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ವಂಚಿಸಿದ್ದಾರೆ. ಈ ಎರಡೂ ದೂರಿನ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಇನ್ನು ಕಾರ್ಕಳದ ಬೆಳ್ಮಣ್ ಗ್ರಾಮದ ಜೆರಾಲ್ಡ್ ನೊರೊನ್ನ ಅವರಿಗೆ ಅಪರಿಚಿತ ವ್ಯಕ್ತಿಗಳು ವಾಟ್ಸ್ ಆ್ಯಪ್ ಮೂಲಕ ಲಿಂಕ್ ಕಳುಹಿಸಿ ಹಣ ಹೂಡಿಕೆಯ ತರಬೇತಿ ಮತ್ತು ಹಣ ಹೂಡಿಕೆಯ ಬಗ್ಗೆ ಮಾಹಿತಿ ತಿಳಿಸಿದ್ದು ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿದ್ದರು. ಬಳಿಕ ಟ್ರೇಡಿಂಗ್ ಆ್ಯಪ್‍ನ ಲಿಂಕ್ ಕಳುಹಿಸಿದ್ದು, ಇದನ್ನು ನಂಬಿದ ಜೆರಾಲ್ಡ್ ನೊರೊನ್ನ ಅವರು ಲಿಂಕ್‍ನಿಂದ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂಪಾಯಿ 9,42,000/- ಹಣವನ್ನು ಪಾವತಿಸಿದ್ದರು ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.