ಬೈಂದೂರು: ಹೊಳೆಗೆ ಬಿದ್ದು ಮೀನುಗಾರ ಮೃತ್ಯು
ಬೈಂದೂರು ಮೇ 28 (ಉಡುಪಿ ಟೈಮ್ಸ್ ವರದಿ):ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಬೈಂದೂರಿನ ಬಡಾಕರೆ ಸೌಪರ್ಣಿಕ ನದಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಮಂಜು (57) ಮೃತಪಟ್ಟವರು. ಇವರು ನಿನ್ನೆ ಮಧ್ಯಾಹ್ನದ ವೇಳೆ ಬಡಾಕರೆ ಸೌಪರ್ಣಿಕ ನದಿಗೆ ಬಲೆ ಹಾಕಿ ಮೀನುಗಾರಿಕೆ ಮಾಡಲು ಹೋಗಿದ್ದರು. ಆದರೆ ಸಂಜೆಯಾದರೂ ಮನೆಗೆ ಬಾರದೇ ಇರುವುದನ್ನು ಕಂಡು ಮನೆಯವರು ಹಾಗೂ ಊರಿನವರು ಸೇರಿ ಮಂಜು ರವರನ್ನು ಹುಡುಕಾಡಿದಾಗ ಇಂದು ಬೆಳಿಗ್ಗೆ ಮನೆಯ ಸಮೀಪದ ಸೌಪರ್ಣಿಕ ಹೊಳೆಯಲ್ಲಿ ಮಂಜು ರವರ ಮೃತ ದೇಹ ಪತ್ತೆಯಾಗಿದೆ. ಅದರಂತೆ ಮಂಜು ಅವರು ನಿನ್ನೆ ಮಧ್ಯಾಹ್ನದ ವೇಳೆ ಹೊಳೆಯಲ್ಲಿ ಮೀನು ಹಿಡಿಯಲು ಬಲೆ ಹಾಕುವ ಸಮಯ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬುದಾಗಿ ಮೃತರ ಮಗ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.