ಕುಂದಾಪುರ: ಭೂಮಿ ಹಕ್ಕಿಗಾಗಿ ಕೊರಗರಿಂದ ಧರಣಿ ಸತ್ಯಾಗ್ರಹ
ಕುಂದಾಪುರ, ಮೇ 27: ಡಾ.ಮುಹಮ್ಮದ್ ಪೀರ್ ವರದಿ ಪ್ರಕಾರ ಕೊರಗ ಕುಟುಂಬಗಳಿಗೆ ನೀಡಲು ಸರಕಾರಿ ಭೂಮಿ ಗುರುತಿಸಿ 10 ತಿಂಗಳಾದರೂ ಸರ್ವೇ ಮಾಡಲು ಇಲಾಖೆ ಮುಂದಾಗಿಲ್ಲ ಎಂದು ಆರೋಪಿಸಿ ಇಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕುಂದಾಪುರ ತಾಲೂಕಿನ ಆಲೂರು ಗ್ರಾಪಂ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಅವರು ಮಾತನಾಡಿ, ಒಂದನೇ ಹಂತದಲ್ಲಿ 10 ಎಕರೆ ಭೂಮಿಯನ್ನು ಈಗಾಗಲೇ ಸರ್ವೇ ಮಾಡಿದ್ದು ಎರಡನೇ ಹಂತದಲ್ಲಿ ಇನ್ನುಳಿದ ಕೊರಗ ಕುಟುಂಬ ಗಳಿಗೆ ಭೂಮಿ ನೀಡಲು 10 ತಿಂಗಳು ಕಳೆದರು ಸರ್ವೇ ಮಾಡದಿದ್ದರಿಂದ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಅವರು ಧರಣಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಲಿತರು, ಆದಿವಾಸಿಗಳ ಭೂಮಿ ಹಕ್ಕಿಗಾಗಿ ಹೋರಾಟ ಮಾಡ ಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇವತ್ತಿಗೂ ಜಿಲ್ಲೆಯಲ್ಲಿ ತುಂಡು ಭೂಮಿಗಾಗಿ ಹೋರಾಟ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭೂ ಹೋರಾಟ ಸಮಿತಿ ರಚಿಸಿ ಜಿಲ್ಲೆಯಾದ್ಯಂತ ಖಾಲಿ ಇರುವ ಸರಕಾರಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಭೂಮಿ ಹೋರಾಟ ಕಟ್ಟಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಧರಣಿ ಸತ್ಯಾಗ್ರಹದಲ್ಲಿ ಆಲೂರು ಗ್ರಾಪಂ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸ ಲಾಯಿತು. ಧರಣಿ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ, ತಾಲೂಕು ಸರ್ವೇಯರ್, ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಆಹವಾಲು ಸ್ವೀಕರಿಸಿದರು.
ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ಧರಣಿಯನ್ನು ವಾಪಾಸ್ಸು ಪಡೆದುಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಅವರು, ಕೊರಗ ಸಮುದಾಯದ ಭೂಮಿ ಸರ್ವೇ ನಡೆಸಲು ವಿಳಂಬವಾಗಿದೆ. ಈ ದಿನ ನಾನು ಕಛೇರಿಗೆ ಹೋಗಿ ಜೂ.10ರಂದು ಜಂಟಿ ಸರ್ವೇಗೆ ಆದೇಶಿಸುತ್ತೇನೆ. ಹಾಗೂ ಇನ್ನೂ ಹೆಚ್ಚಿನ ಭೂಮಿ ನೀಡಲು ಕಂದಾಯ ಅಧಿಕಾರಿಗಳು ಭೂಮಿ ಗುರುತಿಸುವ ಕೆಲಸ ಜಬ್ದಾರಿಯುತವಾಗಿ ನಡೆಸಲಿದ್ದಾರೆ ಎಂದು ಭರವಸೆ ನೀಡಿದರು.
ಧರಣಿ ಸತ್ಯಾಗ್ರಹದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ ಗಣೇಶ ಆಲೂರು, ಕೊರಗ ಸಮುದಾಯದ ಮುಖಂಡರಾದ ಮಹಾಬಲ ಕೋಟ, ಸುನೀತಾ ಪಡುಕೋಣೆ, ಕುಷ್ಟ ಯರುಕೋಣೆ, ನಾರಾಯಣ ಆಲೂರು, ಸುರೇಂದ್ರ ನಾರ್ಕಳಿ, ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಶ್ಚಂದ್ರ ಬಿರ್ತಿ ಬ್ರಹ್ಮಾವರ, ಪ್ರಾಂತ ರೈತ ಸಂಘದ ಸಂಚಾಲಕ ರಾಜು ಪಡುಕೋಣೆಯವರು ಉಪಸ್ಥಿತರಿದ್ದರು.