ಗರುಡ ಗ್ಯಾಂಗ್ ಪುಂಡರ ಮೇಲೆ ಗೂಂಡಾ ಕಾಯ್ದೆ ಯಾಕಿಲ್ಲ – ಶ್ರೀನಿಧಿ ಹೆಗ್ಡೆ
ಉಡುಪಿ ಮೇ 25 : ಉಡುಪಿಯ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಗರುಡ ಗ್ಯಾಂಗಿನ ಪುಂಡರ ಮೇಲೆ ಗೂಂಡಾ ಕಾಯ್ದೆಯನ್ನು ಯಾಕೆ ಹಾಕಿಲ್ಲ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಹಾಗೂ ಹೈಕೋರ್ಟ್ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಉಡುಪಿ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿ ಮಾರಕಾಸ್ತ್ರಗಳಿಂದ ಎರಡು ಗುಂಪುಗಳು ಹಲ್ಲೆ ನಡೆಸಿ ವಾರ ಕಳೆದರೂ ಪೋಲಿಸ್ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗಿದೆ ಎಂದಿದ್ದಾರೆ. ಹಾಗೂ ಮೇ 18 ರಂದು ರಾತ್ರಿ ಘಟನೆ ನಡೆದಿದ್ದರೂ, ಎರಡು ದಿನಗಳ ತಡವಾಗಿ ಮೇ 20 ರಂದು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪೋಲಿಸರು ಪರಿಶೀಲಿಸಿರಲಿಲ್ಲವೇ..? ಪರಿಶೀಲಿಸಿದ್ದರೇ ಘಟನೆಯ ಗಂಭೀರತೆಯನ್ನು ಅರಿತು ಪೋಲಿಸರು ಜಾಣ ಮೌನ ತೋರಿಸಿರುವುದು ಯಾಕೆ ಎಂಬ ಅನುಮಾನ ಕಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರನ್ನು ಸಮಾಜದಲ್ಲಿ ಶಾಂತಿ ಭಂಗವಾಗುತ್ತದೆ ಎಂಬ ಕಾರಣ ನೀಡಿ, ಗಡಿಪಾರು ಮಾಡುತ್ತಾರೆ. ರಾಜ್ಯದಲ್ಲಿ ಇನ್ನು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಈಗಾಗಲೇ ರೌಡಿ ಶೀಟರ್ ಗಳಾಗಿರುವ ಇವರನ್ನು ಯಾಕೆ ಗಡಿಪಾರು ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ಭ್ರಷ್ಟಾಚಾರ ರಹಿತ ಅಧಿಕಾರಿ ಎಂದು ಹೆಸರು ಪಡೆದಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ| ಅರುಣ್ ಅವರಿಗೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರಕಾರದ ಒತ್ತಡವಿತ್ತೇ..? ಗಂಭೀರ ಪ್ರಕರಣ ನಡೆದು ವಾರ ಕಳೆದರೂ, ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.