ಉಡುಪಿ: ಜಿಲ್ಲೆಯಾದ್ಯಂತ ಭಾರೀ ಗಾಳಿ- ಮಳೆ- ಮನೆ, ಕೃಷಿ ಬೆಳೆಗೆ ಅಪಾರ ಹಾನಿ

ಉಡುಪಿ, ಮೇ 25: ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಸುರಿದ ಗಾಳಿ ಮಳೆಗೆ 30ಕ್ಕೂ ಅಧಿಕ ಮನೆಗಳಿಗೆ ಹಾಗೂ ಕೃಷಿ ಬೆಳೆಗೆ ಅಪಾರ ಹಾನಿ ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಕಡಲು ಪ್ರಕ್ಷುಬ್ಧ ಗೊಂಡಿದೆ. ಮಲ್ಪೆ ಬೀಚ್‌ನಲ್ಲಿ ಇಂದು ವಾರಾಂತ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸಿರುವುದು ಮತ್ತು ನೀರಿನಲ್ಲಿ ಆಡುತ್ತಿರುವುದು ಕಂಡು ಬಂದಿದೆ. ಮಳೆ ಹಾಗೂ ಗುಡುಗು ಮಿಂಚಿನ ಹಿನ್ನೆಲೆಯಲ್ಲಿ ಪ್ರವಾಸಿಗರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉಡುಪಿ ನಗರದಲ್ಲಿ ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ನಗರದ ಬೋರ್ಡ್ ಹೈಸ್ಕೂಲ್‌ಗೆ ಸಂಬಂಧಪಟ್ಟ ಆವರಣ ಗೋಡೆ ಕುಸಿದು ಬಿದ್ದು ವಾಣಿಜ್ಯ ಸಂಕೀರ್ಣವೊಂದರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿ, ಅಪಾರ ನಷ್ಟ ಉಂಟಾಗಿದೆ.

ಮತ್ತೊಂದೆಡೆ ಬೋರ್ಡ್ ಹೈಸ್ಕೂಲ್‌ನ ಹಿಂಬದಿಯ ಹಳೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪದ ಕೃಷ್ಣಾ ಕಾಂಪ್ಲೆಕ್ಸ್‌ನ ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ ಸುಮಾರು 100 ಮೀಟರ್ ಉದ್ದದ ಆವರಣ ಗೋಡೆ ಕುಸಿದು ಬಿದ್ದಿದೆ.

ಇದರಿಂದ ಕಾಂಪ್ಲೆಕ್ಸ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳು ಅದರ ಅಡಿಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದ್ದು, ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ. ಈ ಘಟನೆಯಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಆದರೆ ಸಮೀಪದ ಎರಡು ಅಂಗಡಿಗಳಿಗೆ ಮಳೆಯ ನೀರು ನುಗ್ಗಿ ಸ್ವಲ್ಪ ಪ್ರಮಾಣದ ಹಾನಿಯಾಗಿದೆ ಎಂದು ವರದಿಯಾಗಿದೆ.

ಬನ್ನಂಜೆಯಲ್ಲಿ ಮಳೆ ನೀರು ಹರಿದು ಹೋಗುವ ತೋಡು ಭಾರೀ ಮಳೆಗೆ ಜರಿದಿದ್ದು, ಬಳಿಕ ನಗರಸಭೆ ಸಿಬ್ಬಂದಿಗಳು ಆಗಮಿಸಿ ಅದನ್ನು ಸರಿಪಡಿಸಿದರು. ಹಾಗೂ ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪದ ಜಂಕ್ಷನ್ ನಲ್ಲಿ ಅಳವಡಿಸಲಾದ ಟ್ರಾಫಿಕ್ ಬ್ಲಿಂಕರ್ ಭಾರಿ ಗಾಳಿಗೆ ಮುರಿದು ಬಿದ್ದಿದ್ದು,  ಗುಂಡಿಬೈಲು, ಚಿಟ್ಪಾಡಿಯಲ್ಲಿ ಗದ್ದೆ ಸೇರಿದಂತೆ ತಗ್ಗು ಪ್ರದೇಶ ಜಲಾವೃತ ಗೊಂಡಿತ್ತು.

ಉಡುಪಿ ತಾಲೂಕಿನ 76 ಬಡಗಬೆಟ್ಟುವಿನ ಅಬ್ದುಲ್ ರಹೀಮ್ ಎಂಬವರ ಮನೆಯ ಗೋಡೆಗೆ ಸಿಡಿಲು ಬಡಿಲು ಭಾಗಶಃ ಹಾನಿಯಾಗಿದ್ದು, ಸುಮಾರು 75ಸಾವಿರ ರೂ. ನಷ್ಟ ಸಂಭವಿಸಿದೆ. ಅದೇ ರೀತಿ ಸಿಡಿಲು ಬಡಿದ ಪರಿಣಾಮ ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಜ್ಯೋತಿ ಮರಾಠಿ ಎಂಬವರ ಮನೆಗೆ 50ಸಾವಿರ ರೂ. ಮತ್ತು ರೇವತಿ ಎಂಬವರ ಮನೆಗೆ ಒಂದು ಲಕ್ಷ ರೂ. ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರೀ ಗಾಳಿ ಮಳೆಯಿಂದಾಗಿ ಉಡುಪಿ ತಾಲೂಕಿನ ಪಡುತೋನ್ಸೆಯ ನೂರುದ್ದೀನ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಸುಮಾರು 75ಸಾವಿರ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಬೈಂದೂರು ತಾಲೂಕಿನ ಬೈಂದೂರು, ಯಳಜಿತ್, ಯಡ್ತರೆ, ಪಡುವರಿ ಗ್ರಾಮಗಳ ಒಟ್ಟು 20 ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 8.90ಲಕ್ಷರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಕೃಷಿಗೆ ಅಪಾರ ಹಾನಿ: ಗಾಳಿ ಮಳೆಗೆ ಬೈಂದೂರು ತಾಲೂಕಿನ ವಿಶ್ವೇಶ್ವರ ಮುದ್ದೋಡಿ ಎಂಬವರ ಬಾಳೆ ಕೃಷಿ, ರಾಮ ಸೇರಿಗಾರ ಎಂಬವರ ಅಡಿಕೆ ಕೃಷಿ, ನಾಗರಾಜು ಎಂಬವರ ಬಾಳೆ ಹಾಗೂ ಅಡಿಕೆ ಮರ, ಪಡುವರಿ ಗ್ರಾಮದ ಮರ್ಲಿ ಎಂಬವರ ಅಡಿಕೆ ಮರ, ಯಡ್ತರೆ ಗ್ರಾಮದ ವೀರಭದ್ರ ಎಂಬವರ ಅಡಿಕೆ ಬೆಳೆಗೆ ಅಪಾರ ಹಾನಿ ಸಂಭವಿಸಿದ್ದು ಒಟ್ಟು 2.5ಲಕ್ಷ ರೂ. ನಷ್ಟವಾಗಿದೆ.

ಅದೇ ರೀತಿ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಗೋವಿಂದ ನಾಯ್ಕ ಸಂಜೀವ ಮೊಗವೀರ, ಅಂಪಾರು ಗ್ರಾಮದ ಯಶೋಧ ಪಾಣಾ, ಸಿದ್ದು ಪೂಜಾರ್ತಿ ಎಂಬವರ ಜಾನುವಾರು ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದ್ದು, 1.18ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಕಳ ತಾಲೂಕಿನ ನಿಟ್ಟೆಯ ಸಾಧು ಮೂಲ್ಯ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಯಾಗಿದ್ದು, ಸುಮಾರು 30ಸಾವಿರ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಕಾಪು ತಾಲೂಕಿನ ಕಟ್ಟಿಂಗೇರಿ ಹರೀಶ್, ಮಲ್ಲಾರಿನ ದಿನೇಶ್ ಕೋಟ್ಯಾನ್ ಹಾಗೂ ಶಿರ್ವದ ಲೀಲಾ ಆಚಾರ್ಯ ಎಂಬವರ ಮನೆ ಗಳಿಗೆ ಸಿಡಿಲು ಬಡಿದು ಒಟ್ಟು 80ಸಾವಿರ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!