ಪಡುಬಿದ್ರೆ: ಅಕ್ರಮವಾಗಿ ಸಾಗಿಸುತ್ತಿದ್ದ 45 ಟನ್ ಮರಳು ವಶ
ಪಡುಬಿದ್ರಿ ಮೇ 25(ಉಡುಪಿ ಟೈಮ್ಸ್ ವರದಿ) : ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 45 ಟನ್ ಮರಳು ಸಹಿತ ಮೂರು ಟಿಪ್ಪರ್ ಲಾರಿಯನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಡುಬಿದ್ರೆ ಠಾಣಾ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿರುತ್ತಾ ವಾಹನ ತಪಾಸಣೆ ನಡೆಸುತ್ತಿರುವಾಗ ಅಡ್ವೆ ಜಂಕ್ಷನ್ ಬಳಿ ಪಲಿಮಾರು ಕಡೆಯಿಂದ ಅಡ್ವೆ ಕಡೆಗೆ ಹಾಗೂ ನಂದಿಕೂರು ಗ್ರಾಮದ ನಂದಿಕೂರು-ಮುದರಂಗಡಿ ಜಂಕ್ಷನ್ ಬಳಿ ಅಡ್ವೆ ಕಡೆಯಿಂದ ಪಡುಬಿದ್ರಿ ಕಡೆಗೆ ಮತ್ತು ತೆಂಕ ಎರ್ಮಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ನಾರಾಳ್ತಾಯ ಗುಡಿಯ ಬಳಿ ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ಬಂದ ಮರಳು ತುಂಬಿದ 3 ಟಿಪ್ಪರ್ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ.
ಈ ಬಗ್ಗೆ 3 ವಾಹನದ ಚಾಲಕರಾದ ಮೋಹನ, ತೌಫಿಕ್ ಹಾಗೂ ಸಂತೋಷ ಎಂಬಾತನ ಬಳಿ ವಿಚಾರಿಸಿದಾಗ ಚಾಲಕರ ಬಳಿ ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಆಗಲಿ ಮತ್ತು ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇಲ್ಲದಿರುವುದು ಕಂಡು ಬಂದಿದೆ. ಈ ವೇಳೆ 45,000 ರೂ. ಮೌಲ್ಯದ 45 ಟನ್ ಮರಳು ಸಹಿತ 3 ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಈ ಮೂವರೂ ಅಕ್ರಮವಾಗಿ ಮರಳು ಸಾಗಿಸುತ್ತಿದ್ದೂದ್ದಾಗಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.