ಮಂಗಳೂರು ಅಂತಾರಾಷ್ಟ್ರೀಯ ಗುಣಮಟ್ಟದ ನಗರವಾಗಿ ಬೆಳೆಯಬೇಕು: ರೋಹನ್ ಮೊಂತೇರೊ
ಮಂಗಳೂರು, ಮೇ 23 : ಇಲ್ಲಿನ ಜನ ದುಬೈಗೆ ಹೋಗುತ್ತಾರೆ. ಅದರ ಬದಲು ಮಂಗಳೂರನ್ನೇ ದುಬೈ ರೀತಿಯಲ್ಲಿ ಬೆಳೆಸಬೇಕು. ಮಂಗಳೂರು ಅಂತಾರಾಷ್ಟ್ರೀಯ ಗುಣಮಟ್ಟದ ನಗರವಾಗಿ ಬೆಳೆಯಬೇಕು ಎಂದು ರೋಹನ್ ಕಾರ್ಪೊರೇಷನ್ ಸ್ಥಾಪಕ ಮತ್ತು ಅಧ್ಯಕ್ಷ ರೋಹನ್ ಮೊಂತೇರೊ ಅವರು ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮಂಗಳೂರು ನಗರ ಇನ್ನಷ್ಟು ಬೆಳೆಯಲು ಬೇಕಾದ ನೈಸರ್ಗಿಕ ಸೌಲಭ್ಯವನ್ನು ಹೊಂದಿದೆ. ಜಲ, ವಾಯು, ನೆಲ ಸಾರಿಗೆ ಸಂಪರ್ಕ ಹೊಂದಿರುವ ನಗರ. ಇಲ್ಲಿ ಹೆಚ್ಚು ಸುಶಿಕ್ಷಿತ ಜನರು ಇದ್ದಾರೆ. ಜಾತಿ, ಮತದ ದೊಡ್ಡ ಸಮಸ್ಯೆ ಇಲ್ಲ. ಇಲ್ಲಿನ ಜನರು ಹಲವು ಭಾಷೆಗಳಲ್ಲಿ ವ್ಯವಹಾರ ಮಾಡಬಲ್ಲವರಾಗಿದ್ದಾರೆ. ಒಂದು ರೀತಿಯಲ್ಲಿ ಮಂಗಳೂರು ಸ್ವರ್ಗದ ರೀತಿಯ ಪ್ರದೇಶ ಎಂದರು.
“ನಾನು ಒಂಭತ್ತನೇ ತರಗತಿಯವರೆಗೆ ಶಾಲೆ ಹೋದೆ. ನಂತರ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಉಳಾಯಿಬೆಟ್ಟು ಎಂಬ ಸಣ್ಣ ಹಳ್ಳಿಯಲ್ಲಿ ನಮಗೆ ಸ್ವಲ್ಪ ಜಮೀನು ಇದೆ. ತಂದೆ ಕೃಷಿಕ. ನನ್ನನ್ನು ಕೃಷಿ ಕೆಲಸ ಮಾಡಿಕೊಂಡು ಇರಲು ಹೇಳಿದರು. ಆಗ ಬೆಳಗ್ಗೆ 7ರಿಂದ ಪೂರ್ವಾಹ್ನ 11ರವರೆಗೆ ಹೊಲದಲ್ಲಿ ಉಳತೊಡಗಿದೆ. ಸ್ವಲ್ಪ ದಿನದಲ್ಲಿ ನನಗೆ ಕೃಷಿಯ ಕಷ್ಟ ನಷ್ಟದ ಅನುಭವವಾಯಿತು. ನಾನು ಅದರಲ್ಲಿ ಮುಂದುವರಿಯಲು ಇಷ್ಟಪಡಲಿಲ್ಲ. ಬಳಿಕ ಒಂದು ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿದೆ. ಸ್ವಲ್ಪ ದಿನದಲ್ಲಿ ಆ ಕೆಲಸ ಬಿಟ್ಟು ಒಂದು ಕಡೆ ಆಟೋ ಇಲೆಕ್ಟಿಶಿಯನ್ ಆಗಿ ಸೇರಿದೆ. ಬಳಿಕ ಏರ್ ಕಂಡೀಶನ್ ನಲ್ಲೂ ಕೆಲಸ ಮಾಡಿದೆ. ಅಲ್ಲೂ ಹೆಚ್ಚು ದಿನ ಇರಲಿಲ್ಲ. ನಂತರ ಒಂದು ಕ್ಯಾಟರಿಂಗ್ ನಲ್ಲಿ ಸೇರಿದೆ. ಬಳಿಕ ಒಂದು ಲಾಂಡ್ರಿ ಮಾಡಿದೆ. ಅದನ್ನೂ ಆರು ತಿಂಗಳಲ್ಲಿ ಮಾರಾಟ ಮಾಡಿದೆ. ಮುಂದಕ್ಕೆ ಒಂದು ಬೇಕರಿ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಎಂಟು ವರ್ಷ ಕೆಲಸ ಮಾಡಿದೆ. ನಂತರ ಮನೆ ಬಾಡಿಗೆ ವ್ಯವಹಾರ, ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಂದು ಬೃಹತ್ ಬಡಾವಣೆ ನಿರ್ಮಿಸುವ ಹಂತಕ್ಕೆ ತಲುಪಿದೆ. ನಾನು ರಿಯಲ್ ಎಸ್ಟೇಟ್ ನ ಸಣ್ಣಪುಟ್ಟ ಕೆಲಸದಲ್ಲಿ ಅಂದರೆ ಕಲ್ಲು ಹೊತ್ತು ಮೇಸ್ತ್ರಿ ಕೆಲಸ ಮಾಡಿದ ಅನುಭವ, ಕಷ್ಟನಷ್ಟದ ಅನುಭವ ನನಗೆ ಸಾಕಷ್ಟು ಪಾಠ ಕಲಿಸಿದೆ” ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಕಳೆದ 32 ವರ್ಷಗಳಲ್ಲಿ 40 ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಿ 1,400 ಜನರಿಗೆ ಉದ್ಯೋಗ ನೀಡಿದ್ದೇನೆ. 3,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿದ್ದೇನೆ. ಮುಂದೆ ಮಂಗಳೂರಿನ ಪಡೀಲ್, ಸುರತ್ಕಲ್, ಯೆಯ್ಯಾಡಿ, ಸುರತ್ಕಲ್ ನಲ್ಲಿ 8 ಸಾವಿರ ಕೋಟಿ ರೂ.ಗಳ ಯೋಜನೆ ಕೈಗೆತ್ತಿಕೊಳ್ಳಲಿರುವುದಾಗಿ ಅವರು ತಿಳಿಸಿದರು. ಹಾಗೂ ಮುಂದಿನ ಹಂತದಲ್ಲಿ ಮೈಸೂರು, ಗೋವಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸುವ ಚಿಂತನೆ ಹೊಂದಿರುವುದಾಗಿ ತಿಳಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೋರೆಟ್ ಸಂವಹನಾಧಿಕಾರಿ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕಾರ್ಯಕ್ರಮ ನಿರ್ದೇಶಕ ವಿಲೈಡ್ ಡಿಸೋಜ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡಸ್ಥಳ ಉಪಸ್ಥಿತರಿದ್ದರು.