ಮೇ 26-ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ 2024”

ಮಂಗಳೂರು ಮೇ 22 (ಉಡುಪಿ ಟೈಮ್ಸ್ ವರದಿ): ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ “ಯಕ್ಷಧ್ರುವ ಪಟ್ಲ ಸಮಾರಂಭ 2024” ಕಾರ್ಯಕ್ರಮವನ್ನು ಮೇ 26 ರಂದು ಅಡ್ಯಾರ್ ನಲ್ಲಿರುವ ಅಡ್ಯಾರ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, ಸಮಾರಂಭದಲ್ಲಿ ಬೆಳಿಗ್ಗೆ 7.45 ಕ್ಕೆ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ ನಡೆಯಲಿದೆ. ಬಳಿಕ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ವೇಳೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ ಆರ್ಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಶಂಸನೆಗೈಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಪ್ರಯುಕ್ತ ನಡೆಯಲಿರುವ ಆರೋಗ್ಯ ಶಿಬಿರವನ್ನು ಡಾ ರವೀಶ್ ತುಂಗಾ ಅವರು ಮತ್ತು ರಕ್ತದಾನ ಶಿಬಿರವನ್ನು ಡಾ ಶ್ರೀಧರ್ ಉದ್ಘಾಟಿಸಲಿದ್ದಾರೆ. ಈ ವೇಳೆ ಉಚಿತ ಕಣ್ಣು ಪರೀಕ್ಷೆ, ಕನ್ನಡ ವಿತರಣೆಯೂ ಇದೆ ಎಂದು ಅವರು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಯುವ ಭಾಗವತರಿಂದ “ಗಾನ ವೈಭವ” ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಶಶಿ ಕ್ಯಾಟರರ್ಸ್ ಸಂಸ್ಥೆ, ಉಜಿರೆ ಕಾಶಿ ಪ್ಯಾಲೇಸ್ ಸಂಸ್ಥೆಯ ಮಾಲಕ ಶಶಿಧರ್ ಬಿ ಶೆಟ್ಟಿ ಬರೋಡಾ ವಹಿಸಲಿದ್ದಾರೆ. ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರಕಾರದ ಪ್ರಿನ್ರಿಪಾಲ್ ಸೆಕ್ರೆಟರಿ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್, ಮುಂಬಯಿ ಭವಾನಿ ಶಿಪ್ಪಿಂಗ್ ಮಾಲಕ ಕೆ.ಡಿ ಶೆಟ್ಟಿ, ಮುಂಬಯಿ ಮೆಕಯ್ ಸಂಸ್ಥೆಯ ಅಧ್ಯಕ್ಷ ಕೆ ಎಂ ಶೆಟ್ಟಿ ಮಧ್ಯಗುತ್ತು ಮೊದಲಾದವರು ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.30 ಕ್ಕೆ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 3.30 ಕ್ಕೆ ಪಾರಂಪರಿಕ ಯಕ್ಷಗಾನ “ಕಿರಾತಾರ್ಜುನ” ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಂಜೆ 5.15 ಕ್ಕೆ ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪಟ್ಲ ಫೌಂಡೇಶನ್ ನ ಟ್ರಸ್ಟಿ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಚಲನ ಚಿತ್ರ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿ, ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಡಾ. ಎಚ್ ಎಸ್ ಬಲ್ಲಾಳ್, ಕೆ ಕೆ ಶೆಟ್ಟಿ, ವಕ್ವಾಡಿ ಪ್ರವೀಣ್ ಶೆಟ್ಟಿ, ಕನ್ಯಾನ ರಘುರಾಮ ಶೆಟ್ಟಿ, ಡಾ ಎಂ ಮೋಹನ್ ಆಳ್ವ ಮೊದಲಾದವರು ಭಾಗವಹಿದಲಿದ್ದಾರೆ.

ಇದೇ ವೇಳೆ ಸಮಾರಂಭದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024 ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿ, 2024 ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಅಂ ದಿವಾಕರ್ ರಾವ್ ಮತ್ತು ಶೈಲಾ ದಿವಾಕರ್ ಹಾಗೂ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 18 ಮಂದಿಗೆ ಕಲಾ ಗೌರವವನ್ನು ನೀಡಿ ಸನ್ಮಾನಿಸಲಾಗುವುದು. ಇದರ ಜೊತೆಗೆ ಈ ಬಾರಿ ವೃತ್ತಿಪರ ಕಲಾವಿದರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ (ಕಲಾ, ವಾಣಿಜ್ಯ ಹಾಗು ವಿಜ್ಞಾನ ಹೀಗೆ ಒಟ್ಟು 4 ವಿಭಾಗಗಳಲ್ಲಿ) ಯಲ್ಲಿ 90% ಕ್ಕಿಂತ ಮೇಲ್ಪಟ್ಟು ಗರಿಷ್ಟ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ ಅಂ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ , ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಡಾ ಮನು ರಾವ್, ಜೊತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!